Thursday, July 7, 2022
Home ಮನರಂಜನೆ ಪ್ರವಾಸ ಉಡುಪಿ ಪ್ರವಾಸಿಗರ ಆಕರ್ಷಣೀಯ ಜಿಲ್ಲೆಯಾಗಬೇಕು

ಉಡುಪಿ ಪ್ರವಾಸಿಗರ ಆಕರ್ಷಣೀಯ ಜಿಲ್ಲೆಯಾಗಬೇಕು

ಉಡುಪಿ ಪ್ರವಾಸಿಗರ ಆಕರ್ಷಣೀಯ ಜಿಲ್ಲೆಯಾಗಬೇಕು
(ಸುದ್ದಿಕಿರಣ ವರದಿ)

ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶಗಳಿದ್ದು, ಅವುಗಳನ್ನು ಬಳಿಸಿಕೊಂಡು ವಿವಿಧ ಪ್ರವಾಸಿ ಯೋಜನೆ ಅಭಿವೃದ್ಧಿಗೊಳಿಸಿ ಜಿಲ್ಲೆಯನ್ನು ಪ್ರವಾಸಿಗರ ಆಕರ್ಷಣೀಯ ತಾಣವನ್ನಾಗಿ ಮಾಡಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಸೋಮವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ದಿ ಸಮಿತಿ ಮತ್ತು ಕರಾವಳಿ ಪ್ರವಾಸೋದ್ಯಮ ಸಂಘಟನೆ ಸಂಯುಕ್ತಾಶ್ರಯದಲ್ಲಿ ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಎಂಬ ಸಂದೇಶದೊಂದಿಗೆ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರವೂ ನಷ್ಟ ಅನುಭವಿಸಿದೆ. ಆದರೆ, ಪ್ರಸ್ತುತ ಪ್ರವಾಸಿಗರು ಪ್ರವಾಸಿ ಕ್ಷೇತ್ರಗಳಿಗೆ ಆಗಮಿಸುತ್ತಿದ್ದು ಉಡುಪಿಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ ಮತ್ತು ಹೆಲ್ತ್ ಟೂರಿಸಮ್ ಗೆ ವಿಫುಲ ಅವಕಾಶಗಳಿವೆ. ಜಿಲ್ಲೆಯ ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಇದು ಸಕಾಲ. ಅಂಥ ತಾಣಗಳನ್ನು ಮುನ್ನೆಲೆಗೆ ತರಬೇಕಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಟೂರಿಸಂ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಈ ಕಾರ್ಯಪಡೆ ಸಭೆಗಳನ್ನು ನಡೆಸಿ ಸಭೆಯ ನಿರ್ಣಯಗಳನ್ನು ಸರಕಾರಕ್ಕೆ ವರದಿ ಕಳಿಸಬೇಕು ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ವೈವಿಧ್ಯತೆಯಿಂದ ಕೂಡಿರುವ ಹಲವು ತಾಣಗಳಿವೆ. ಅವುಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಗೊಳಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಬೇಕು.

ಹೋಂ ಸ್ಟೇ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದ್ದು, ಹೋಂ ಸ್ಟೇ ಮಾಡಲು ಎನ್.ಓ.ಸಿ ಅಗತ್ಯವಿದ್ದು, ಅದರಲ್ಲಿನ ಷರತ್ತುಗಳನ್ನು ಸರಳೀಕರಣಗೊಳಿಸಲಾಗುವುದು. ಆತಿಥ್ಯಕ್ಕೆ ಉಡುಪಿ ಪ್ರಸಿದ್ಧಿ ಹೊಂದಿದ್ದು, ಆ ಕ್ಷೇತ್ರದ ಪರಿಣಿತರ ಕಾರ್ಯಾಗಾರ ಏರ್ಪಡಿಸಲಾಗುವುದು. ಉಡುಪಿ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಇಲ್ಲಿಂದ ತಮ್ಮ ಜೀವನದ ಅತ್ಯುತ್ತಮ ನೆನಪುಗಳೊಂದಿಗೆ ಮರಳುವಂತೆ ಪ್ರವಾಸಿ ಸೌಲಭ್ಯ ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಕೇರಳ ಮತ್ತು ಗೋವಾ ಮಧ್ಯೆ ಇರುವ ಕರ್ನಾಟಕದ ಕರಾವಳಿಯಲ್ಲಿ 100ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಜಿಲ್ಲೆಯ ಪ್ರವಾಸಿ ತಾಣಗಳ ಜೊತೆಗೆ ಇಲ್ಲಿನ ಪಾರಂಪರಿಕತೆಯನ್ನೂ ಪರಿಚಯಿಸುವ ಅಗತ್ಯವಿದೆ. ಇಲ್ಲಿನ ಕರಕುಶಲ ವಸ್ತುಗಳು ಮತ್ತು ಸಂಸ್ಕೃತಿ ಕುರಿತು ಹೋಟೆಲ್, ರೆಸಾರ್ಟ್ ಗಳಲ್ಲಿ ಪ್ರದರ್ಶನ, ಮಾಹಿತಿ ಇರಬೇಕು.

ಪ್ರಮುಖವಾಗಿ ಎಲ್ಲಡೆ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಈಗಾಗಲೇ ಕಸ ಹಾಕುವ ಜಾಗ ಗುರುತಿಸಿ ಅಲ್ಲಿ ಸ್ವಚ್ಛತೆ ಮೂಡಿಸಲಾಗುತ್ತಿದೆ. ಜಿಲ್ಲೆಯನ್ನು ಬ್ಲಾಕ್ ಸ್ಪಾಟ್ ಮುಕ್ತ ಮಾಡಲಾಗುತ್ತಿದೆ. ಅದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಕೊಡುಗೆ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ 100ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿ, ಅಲ್ಲಿನ ಪ್ರವಾಸಿ ತಾಣಗಳು ಮತ್ತು ಅವುಗಳ ಅಭಿವೃದ್ದಿ ಕುರಿತ ಪ್ರವಾಸ ಕಥನ ಉಪನ್ಯಾಸ ನೀಡಿದ ಕೆ.ಎಂ.ಸಿ. ಮಣಿಪಾಲದ ಮೂಳೆ ವಿಭಾಗ ಮುಖ್ಯಸ್ಥ ಮತ್ತು ಉಪನ್ಯಾಸಕ ಡಾ. ಕಿರಣ್ ಆಚಾರ್ಯ ಮಾತನಾಡಿ, ಸ್ಥಳೀಯ ಪ್ರವಾಸಿ ತಾಣಗಳನ್ನು ವಿದೇಶಗಳ ರೀತಿಯಲ್ಲಿ ವಿವಿಧ ಬಗೆಯ ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ಧಿಗೊಳಿಸಬಹುದು ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಪೌರಾಯುಕ್ತ ಉದಯ್ ಶೆಟ್ಟಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ ಶೆಟ್ಟಿ ಮೊದಲಾದವರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೊ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.

ಕಾಪು ಬೀಚ್ ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪ್ರವಾಸಿ ಮಿತ್ರ ಲಕ್ಷ್ಮೀನಾರಾಯಣ ರಾವ್ ಅವರನ್ನು ಅಭಿನಂದಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!