ಸುದ್ದಿಕಿರಣ ವರದಿ
ಗುರುವಾರ, ಜನವರಿ 27
ಜ. 31: ಸಂಸ್ಕೃತಿ ಉತ್ಸವ
ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಶ್ರಯದಲ್ಲಿ ಪ್ರತಿವರ್ಷ ನಡೆಯುವ ಸಂಸ್ಕೃತಿ ಉತ್ಸವ ಈ ತಿಂಗಳ 31ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಪ್ರಭಾವತಿ ಶೆಣೈ ಹಾಗೂ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ಒಂದು ಲಕ್ಷ ರೂ. ನಗದು ಒಳಗೊಂಡ ವಿಶ್ವಪ್ರಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಗುವುದು.
ಅಂದು ಸಂಜೆ 5.45ರಿಂದ ನಡೆಯುವ ಕಾರ್ಯಕ್ರಮವನ್ನು ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ವಿಶ್ವನಾಥ್ ಶೆಣೈ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.
ನಂತರ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಕಲಾವಿದರಿಂದ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದ ಮಕ್ಕಳ ನಾಟಕ ‘ಮಾಯಾಲೋಕ’ ಪ್ರದರ್ಶನಗೊಳ್ಳಲಿದೆ ಎಂದು ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ತಿಳಿಸಿದ್ದಾರೆ.