ಸಂಗೀತದಿಂದ ಸಹಜ ಸಂತೋಷ
(ಸುದ್ದಿಕಿರಣ ವರದಿ)
ಮಣಿಪಾಲ: ಹಿರಿಯರಿಂದ ಬಳುವಳಿಯಾಗಿ ಬಂದಿರುವ ಶಾಸ್ತ್ರೀಯ ಸಂಗೀತದಂಥ ಕಲೆಗಳನ್ನು ಅಭ್ಯಸಿಸಿ, ಅನುಭವಿಸಿ, ಜೀವನದಲ್ಲಿ ಸಹಜ ಸಂತೋಷ ಪಡೆಯೋಣ. ಕ್ಷಣಿಕ ಸುಖ ಕೊಡುವ ವಿಷಯಗಳು ಜಾರುಬಂಡಿಯಂತೆ ಖುಷಿ ಪಡಿಸುತ್ತಲೇ ದೊಡ್ಡ ಪ್ರಪಾತಕ್ಕೆ ದೂಡಿಬಿಡುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಎಚ್ಚರಿಕೆ ನೀಡಿದರು.
ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ವಿಜಯ ದಶಮಿ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಂಗೀತದ ಪ್ರಭುತ್ವೀಕರಣ
ಅಭ್ಯಾಗತರಾಗಿದ್ದ ಶಿಕ್ಷಣ ತಜ್ಞ ಡಾ| ಮಹಾಬಲೇಶ್ವರ ರಾವ್, ಸ್ವರಗಳ ಮೂಲಕ ಪರಿಸರವನ್ನು ಸ್ವಚ್ಛಗೊಳಿಸುವುದು ಸಂಗೀತದಿಂದ ಸಾಧ್ಯ. ಸಂಗೀತ ಒಂದು ವಿಶ್ವ ಭಾಷೆ. ವಿದ್ಯುನ್ಮಾನದ ಸಹಾಯದಿಂದ ಸಂಗೀತವನ್ನು ಎಲ್ಲರೂ ಕಲಿಯಲು ಸಾಧ್ಯವಾಗುವಂಥ ಕಾಲಘಟ್ಟದಲ್ಲಿ ನಾವಿದ್ದೇವೆ. ಇದು ಸಂಗೀತದ ಪ್ರಜಾಪ್ರಭುತ್ವೀಕರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಗೀತದಿಂದ ದೊರಕುವುದು ಬ್ರಹ್ಮಾನಂದ ಹಾಗೂ ಅನುಭಾವಿಕತೆಯ ಸ್ಪರ್ಶ. ಅದನ್ನು ವರ್ಣಿಸುವುದು ಅಸಾಧ್ಯ. ಸಂಗೀತ ಆಧ್ಯಾತ್ಮಿಕ ಹಾಗೂ ದೈವಿಕವಾದದ್ದು ಎಂದವರು ಹೇಳಿದರು.
ಸಂಗೀತ ಕಛೇರಿ
ಬೆಳಿಗ್ಗೆ 7.45ರಿಂದ ರಾತ್ರಿ 8 ನಿರಂತರ ಸಂಗೀತ ಕಾರ್ಯಕ್ರಮ ನಡೆದವು.
ಬೆಳಿಗ್ಗೆ ಗುರುಗಳಿಂದ ಸಂಗೀತ ಪಾಠ, ಮಧ್ಯಾಹ್ನ ವೇದಘೋಷ, ಸರಸ್ವತಿ ಪೂಜೆ ನಡೆಯಿತು.
ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಗೌರವಿಸಲಾಯಿತು.
ವಿದ್ಯಾಲಯದ ಮಕ್ಕಳಿಂದ ಪಿಳ್ಳಾರಿ ಗೀತೆಗಳು, ಎಲ್ಲಾ ಕಲಾವಿದರಿಂದ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ, ಹಲವಾರು ಕಿರಿಯ ಕಲಾವಿದರಿಂದ ಕಛೇರಿ, ವಿದುಷಿ ಲತಾ ತಂತ್ರಿ ಅವರಿಂದ ಪ್ರಧಾನ ಕಛೇರಿ ನಡೆಯಿತು.
ವಿದುಷಿ ಉಮಾಶಂಕರಿ ಸ್ವಾಗತಿಸಿ, ನಿರೂಪಿಸಿದರು. ಡಾ. ಉದಯಶಂಕರ ಭಟ್ ಇದ್ದರು