Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ನಾಟಕಗಳಿಂದ ಮನಸ್ಸು ಕಟ್ಟುವ ಕಾರ್ಯ ಸಾಕಾರ

ನಾಟಕಗಳಿಂದ ಮನಸ್ಸು ಕಟ್ಟುವ ಕಾರ್ಯ ಸಾಕಾರ

ಸುದ್ದಿಕಿರಣ ವರದಿ
ಭಾನುವಾರ, ಮಾರ್ಚ್ 20

ನಾಟಕಗಳಿಂದ ಮನಸ್ಸು ಕಟ್ಟುವ ಕಾರ್ಯ ಸಾಕಾರ
ಉಡುಪಿ: ಮನಸ್ಸು ಮನಸ್ಸುಗಳನ್ನು ಕಟ್ಟುವ ಕೆಲಸ ನಾಟಕಗಳಿಂದ ಸಾಧ್ಯ ಎಂದು ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಡಾ| ರಾಜಪ್ಪ ದಳವಾಯಿ ಹೇಳಿದರು.

ಸುಮನಸಾ ಕೊಡವೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ, ರಾಷ್ಟ್ರೀಯ ಸಂಸ್ಕೃತಿ ಮಂತ್ರಾಲಯ ನವದೆಹಲಿ ಹಾಗೂ ಪೇಜಾವರ ಮಠ ಆಶ್ರಯದಲ್ಲಿ ನಡೆಯುತ್ತಿರುವ ರಂಗ ಹಬ್ಬ ಬಹುಭಾಷಾ ನಾಟಕೋತ್ಸವವನ್ನು ಇಲ್ಲಿನ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂಟದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಓರ್ವ ವ್ಯಕ್ತಿ ರಂಗಭೂಮಿಗೆ ಬರುತ್ತಿದ್ದಾನೆ ಎಂದರೆ, ಆತ ಸಮಾಜಕ್ಕೆ ಏನನ್ನಾದರೂ ಕೊಡುತ್ತಾನೆ ಎಂದು ತಿಳಿಯಬೇಕು. ರಂಗಕರ್ಮಿಯಿಂದ ಸಮಾಜಕ್ಕೆ ಕೊಡುಗೆ ಸಲ್ಲುತ್ತದೆ ಎಂದರು.

ವ್ಯಕ್ತಿಯ ನೈಜ ಗಾತ್ರವನ್ನು ರಂಗಭೂಮಿ ಮಾತ್ರ ಅಭಿವ್ಯಕ್ತಿಸಬಲ್ಲುದು. ರಂಗಭೂಮಿ ದುಃಖಿಸುವ, ನಗಿಸುವ ಕೆಲಸವನ್ನೂ ಮಾಡಬಲ್ಲುದು. ಆದರೆ, ಟಿವಿ ಅದನ್ನೆಲ್ಲ ಕಸಿಯುತ್ತದೆ ಎಂದು ಡಾ| ದಳವಾಯಿ ಹೇಳಿದರು.

ರಂಗ ಸಂಘಟನೆ ಸವಾಲಿನದ್ದಾಗಿದ್ದು, ಇಲ್ಲಿ ಅನೇಕ ಸಮಸ್ಯೆಗಳು, ದುಃಖಗಳು ಇವೆ. ಅದನ್ನೆಲ್ಲ ಬಿಡಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಕಳೆದ 20 ವರ್ಷದಿಂದ ರಂಗ ಚಟುವಟಿಕೆ ನಡೆಸಿಕೊಂಡು ಬರುತ್ತಿರುವ ಸುಮನಸಾ ಸಂಸ್ಥೆಯ ಕಾರ್ಯ ಸಣ್ಣದೇನಲ್ಲ ಎಂದು ಪ್ರಶಂಸಿಸಿದರು.

ರಂಗಭೂಮಿ ಅತ್ಯಂತ ಪ್ರಭಾವಿ ಮಾಧ್ಯಮವಾಗಿದ್ದು, ಅದರಿಂದ ಮಕ್ಕಳ ಮನೋವಿಕಾಸ ಸಾಧ್ಯ ಎಂಬುದು ಸಂಶೋಧನೆಗಳಿಂದ ದೃಢವಾಗಿದೆ ಎಂದ ಡಾ| ದಳವಾಯಿ, ಭಾಷೆ ಭಿನ್ನವಾದರೂ ಭಾವ ಒಂದೇ ಆಗಿದ್ದು, ರಂಗ ಕ್ರಮ ಏಕರೂಪವಾಗಿರುವುದರಿಂದ ಭಾಷಾ ಸಮಸ್ಯೆ ಅಡ್ಡಿಯಾಗದು ಎಂದರು.

ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಕೊಡವೂರು ದೇವಳ ಆಡಳಿತ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಉದ್ಯಮಿ ಅಮೃತ ಶೆಣೈ, ರಂಗಭೂಮಿ ಉಡುಪಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಅಭ್ಯಾಗತರಾಗಿದ್ದರು.

ಸುಮನಸಾ ಸಂಸ್ಥೆ ಗೌರವಾಧ್ಯಕ್ಷ ಭಾಸ್ಕರ ಪಾಲನ್ ಪಾಚನಬೈಲು ಇದ್ದರು.

ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ರಾಜಗೋಪಾಲ ಶೇಟ್ ಅವರಿಗೆ ರಂಗಸಾಧಕ ಉಪಾದಿಯಿತ್ತು ಸನ್ಮಾನಿಸಲಾಯಿತು.

ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ ಕೊಡವೂರು ಸ್ವಾಗತಿಸಿ, ಕಾರ್ಯದರ್ಶಿ ಜೀವನ್ ಕುಮಾರ್ ವಂದಿಸಿದರು. ಅಕ್ಷತ್ ಅಮೀನ್ ನಿರೂಪಿಸಿದರು. ಛಾಯಾಗ್ರಾಹಕ ದಿವಾಕರ ಕಟೀಲ್ ಪ್ರಾರ್ಥಿಸಿದರು.

ಬಳಿಕ ಉಡುಪಿ ರಂಗಭೂಮಿ ಕಲಾವಿದರಿಂದ ವಿಶಾಂಕೇ ಕನ್ನಡ ನಾಟಕ ಪ್ರದರ್ಶನಗೊಂಡಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!