ಯಕ್ಷಾಂಗಣ ಪ್ರಶಸ್ತಿಗೆ ಆಯ್ಕೆ
ಮಂಗಳೂರು, ಡಿ. 15 (ಸುದ್ದಿಕಿರಣ ವರದಿ): ಇಲ್ಲಿನ ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ- ಮಂಥನ ಮತ್ತು ಪ್ರದರ್ಶನ ವೇದಿಕೆ ವರ್ಷಂಪ್ರತಿ ನೀಡುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಮೂಡುಬಿದಿರೆ ಉದ್ಯಮಿ, ಕಲಾಪೋಷಕ ಕೆ. ಶ್ರೀಪತಿ ಭಟ್ ಆಯ್ಕೆಯಾಗಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯನ್ನು ಯಕ್ಷ ಶಾಂತಲಾ ಬಿರುದಾಂಕಿತ ಹಿರಿಯ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ಟರಿಗೆ ನೀಡಲಾಗುವುದು ಎಂದು ಯಕ್ಷಾಂಗಣ ಕಾರ್ಯಾಧ್ಯಕ್ಷ ಡಾ| ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಶ್ರೀಪತಿ ಭಟ್
ಉದ್ಯಮಿ, ದಾನಿಯಾಗಿ ಯಕ್ಷಗಾನ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯೂ ಎಕ್ಸ್ ಪೋರ್ಟ್ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, 2012ರಲ್ಲಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ನೆರವು ನೀಡುತ್ತಿದ್ದಾರೆ.
ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಹಿಳಾ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ನೆರವು ಒದಗಿಸುತ್ತಿದ್ದಾರೆ.
ಪಾತಾಳ ವೆಂಕಟ್ರಮಣ ಭಟ್
ಪಾತಾಳ ವೆಂಕಟ್ರಮಣ ಭಟ್ಟರಿಗೆ ಪ್ರಸ್ತುತ 88ರ ಇಳಿಹರೆಯ. ಪ್ರಾಥಮಿಕ ಹಂತದಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ನೀಡಿ 1953ರಲ್ಲಿ ಕಾಂಚನ ಲಕ್ಷ್ಮೀನಾರಾಯಣ ಯಕ್ಷಗಾನ ನಾಟಕ ಮಂಡಳಿಯಲ್ಲಿ ಗುರುಕುಲ ಮಾದರಿಯ ಯಕ್ಷಗಾನ ಮೂಲ ಪಾಠ ಕಲಿತ ಅವರು, ಬಡಗಿನ ಸೌಕೂರು ಮೇಳದಲ್ಲಿ ತಿರುಗಾಟ ಮಾಡಿದ್ದಾರೆ.
1957ರಿಂದ ಮೂಲ್ಕಿ ಮತ್ತು ಸುರತ್ಕಲ್ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ಮುನ್ನಡೆದು 1964 ರಿಂದ ಧರ್ಮಸ್ಥಳ ಮೇಳದಲ್ಲಿ ಸೇವೆಗೈದು 1981ರಲ್ಲಿ ರಂಗದಿಂದ ನಿವೃತ್ತರಾದರು.
ರಂಭೆ, ಊರ್ವಶಿ, ಮೇನಕೆ, ಮೋಹಿನಿ, ಮಾಯಾ ಶೂರ್ಪನಖಿ, ಗುಣಸುಂದರಿ, ಅಂಬೆ, ಕೈಕೆ, ಮಾಯಾ ಅಜಮುಖಿ, ಪೂತನಿ, ಶ್ರೀದೇವಿ, ದ್ರೌಪದಿ, ದಿತಿ, ಮಾಲಿನಿ, ಗೌರಿ, ಅಮ್ಮುದೇವಿ, ಪುಲ್ಲ ಪೆರ್ಗಡ್ತಿ ಮುಂತಾದ ಪಾತ್ರಗಳನ್ನು ಉತ್ಕಷ್ಟ ರೀತಿಯಲ್ಲಿ ನಿರ್ವಹಿಸಿದವರು.
ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ಡಿ. 18 ಮತ್ತು 19ರಂದು ಮಂಗಳೂರಿನಲ್ಲಿ ನಡೆಯುವ 9ನೇ ವರ್ಷದ ಕನ್ನಡ ನುಡಿಹಬ್ಬ `ಯಕ್ಷಗಾನ ತಾಳಮದ್ದಳೆ ಪರ್ವ 2021 ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಡಾ| ಕುಕ್ಕುವಳ್ಳಿ ತಿಳಿಸಿದ್ದಾರೆ.