ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 25
`ದೇವಿಭಟ್ರು’ ಮುಳಿಯಾಲ ಭೀಮ ಭಟ್ ಇನ್ನಿಲ್ಲ
ಮೂಡುಬಿದಿರೆ: ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ, ಹಿರಿಯ ಕಲಾವಿದ ಮುಳಿಯಾಲ ಭೀಮ ಭಟ್ ಮಂಗಳವಾರ ಮುಂಜಾನೆ ಇಲ್ಲಿಗೆ ಸಮೀಪದ ಕಾಂತಾವರದಲ್ಲಿ ನಿಧನರಾದರು.
85ರ ಹರೆಯದವರಾದ ಅವರು ವಯೋಸಜಹ ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದರು.
ಕಾಂತಾವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆ ಬೆಳುವಾಯಿ ಸ್ಮಶಾನದಲ್ಲಿ ನಡೆಸಲಾಗುತ್ತಿದೆ.
ಕಳೆದ 20 ವರ್ಷದಿಂದ ಕಾಂತಾವರ ದೇವಸ್ಥಾನದಲ್ಲಿ ಸೇವೆ ಮಾಡುತ್ತಿದ್ದ ಭೀಮ ಭಟ್ಟರ ಆರೋಗ್ಯ ಕಳೆದ ನಾಲ್ಕು ತಿಂಗಳಿಂದ ಹದಗೆಟ್ಟಿತ್ತು.
ಕಾಂತಾವರ ಕ್ಷೇತ್ರಾಧಿಕಾರಿ ಡಾ. ಜೀವಂಧರ ಬಳ್ಳಾಲ್ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಭೀಮ ಭಟ್ಟರ ತಂದೆ ಕೇಚಣ್ಣ (ಕೇಶವ) ಭಟ್ಟರೂ ಯಕ್ಷಗಾನ ವೇಷಧಾರಿಯಾಗಿದ್ದರು. ಕುರಿಯ ಶಾಸ್ತ್ರಿಗಳ ನೆಚ್ಚಿನ ಶಿಷ್ಯರಲ್ಲೊಬ್ಬರಾದ ಇವರು, 1951ರಲ್ಲಿ ಕುರಿಯ ಶಾಸ್ತ್ರಿ ಸಂಚಾಲಕತ್ವದ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಜೀವನ ಆರಂಭಿಸಿದ್ದರು.
ಕೋಡಂಗಿ, ಬಾಲಗೋಪಾಲ, ಮುಖ್ಯ ಸ್ತ್ರೀವೇಷ, ಪೀಠಿಕೆ ವೇಷ…. ಹೀಗೆ ಹಂತಹಂತವಾಗಿ ಮೇಲೇರಿದ ಅವರು ಪ್ರಸಿದ್ಧ ಕಲಾವಿದರಾಗಿದ್ದರು.
ಏಳು ವರ್ಷ ಧರ್ಮಸ್ಥಳ ಮೇಳದ ತಿರುಗಾಟ ಮಾಡಿ, 1958ರಿಂದ ಕಟೀಲು ಮೇಳಕ್ಕೆ ಸೇರಿದರು.
ಶ್ರೀ ದೇವಿ ಮಹಾತ್ಮೆ ಪ್ರಸಂಗದ ‘ಶ್ರೀದೇವಿ’ಯ ಪಾತ್ರವನ್ನು ‘ಒಲಿಸಿಕೊಂಡ’ ಮುಳಿಯಾಲ ಕಲಾಭಿಮಾನಿಗಳಿಗೆ ‘ದೇವಿ ಭಟ್ರು’ ಎಂದೇ ಪರಿಚಿತರಾಗಿದ್ದರು
ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿಯಂಥ ಗಂಡುಗತ್ತಿನ ಪಾತ್ರಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸ್ತ್ರೀ ಪಾತ್ರವಲ್ಲದೆ ಪುರುಷ ಪಾತ್ರಗಳಾದ ಅತಿಕಾಯ, ತಾಮ್ರಧ್ವಜ, ಕರ್ಣ, ದ್ರುಪದ, ಕೃಷ್ಣ, ಹನುಮಂತ ಹೀಗೆ ರಂಗದ ಬಹುತೇಕ ಪಾತ್ರಗಳಿಗೆ ತನ್ನದೇ ಆದ ಮೆರುಗು ನೀಡಿದ್ದರು.
ಸೀತೆ, ದಮಯಂತಿ, ಚಂದ್ರಮತಿ, ದ್ರೌಪದಿಯಂಥ ಗರತಿ ಪಾತ್ರಗಳಲ್ಲಿಯೂ ಕಲಾ ಪ್ರೌಢಿಮೆ ಮೆರೆದಿದ್ದರು.
ಭಟ್ ಅವರ ನಿಧನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.