Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಅತಿವೃಷ್ಟಿ ನಷ್ಟ ಭರಿಸಿಕೊಡಲು ಮನವಿ

ಅತಿವೃಷ್ಟಿ ನಷ್ಟ ಭರಿಸಿಕೊಡಲು ಮನವಿ

ಸುದ್ದಿಕಿರಣ ವರದಿ
ಗುರುವಾರ, ಜುಲೈ 21

ಅತಿವೃಷ್ಟಿ ನಷ್ಟ ಭರಿಸಿಕೊಡಲು ಮನವಿ
ಉಡುಪಿ: ಈಚೆಗೆ ಸುರಿದ ಭಾರೀ ಮಳೆಯಿಂದಾಗಿ ನಷ್ಟ ಅನುಭವಿಸಿರುವವರಿಗೆ ನಷ್ಟ ಭರಿಸಿಕೊಡುವಂತೆ ಭಾರತೀಯ ಕಿಸಾನ್ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಭಾಕಿಸಂ ಅಧ್ಯಕ್ಷ ನವೀನಚಂದ್ರ ನೇತೃತ್ವದ ನಿಯೋಗ, ಸುಮಾರು ಒಂದು ತಿಂಗಳ ಕಾಲ ಸುರಿದ ವಿಪರೀರ ಮಳೆಯಿಂದ ಜಿಲ್ಲೆಯಾದ್ಯಂತ ಕೃಷಿ ಭೂಮಿ ಮುಳುಗಿವೆ. ಅನೇಕ ರೈತರ ಮನೆ, ಕೊಟ್ಟಿಗೆಗಳು ಕುಸಿದಿದೆ. ಗಾಳಿಗೆ ಅಡಿಕೆ, ಬಾಳೆ ಮೊದಲಾದ ಮರಗಳು ಬಿದ್ದಿವೆ. ಈ ಬಾರಿ ತಡವಾಗಿ ಪ್ರಾರಂಭವಾದ ಭತ್ತದ ಬೇಸಾಯ ವೇಗ ತೆಗೆದುಕೊಳ್ಳುತ್ತಿರುವಾಗಲೇ ಅತೀ ಮಳೆ ಸುರಿದು ನೆರೆ ಬಂದು, ನಾಟಿ ಮಾಡಿದ ಭತ್ತದ ಗಿಡಗಳೆಲ್ಲಾ ಕೊಚ್ಚಿ ಹೋಗಿವೆ.

ಇನ್ನೂ ಕೆಲವು ಕಡೆ ಕಳೆದ ಹತ್ತು ದಿನಗಳಿಂದ ನೆರೆ ನಿಂತು  ಮಾಡಿದ ಭತ್ತದ ನೇಜಿ (ಸಸಿ) ಕೊಳೆತು ಹೋಗಿವೆ.

ನಾಟಿ ಗೆ ತಯಾರಿಸಿಟ್ಟಿದ್ದ ನೇಜಿ ಉಪಯೋಗಕ್ಕೆ ಬಾರದೆ ಹಾಳಾಗಿವೆ.

ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಸಮರ್ಪಕ ಔಷದ ಸಿಂಪಡಣೆ ಮಾಡಲಾಗದ ಕಾರಣ ಕೊಳೆ ರೋಗ ಪ್ರಾರಂಭವಾಗಿದೆ. ಅಕಾಲಿಕ ಮಳೆಯಿಂದಾಗಿ ಗೇರು ಬೆಳೆ ಕೂಡಾ ಹಾಳಾಗಿದ್ದು, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೃಷಿಗಾಗಿ ರೈತರು ಸಾಕಷ್ಟು ಹಣ ವ್ಯಯಿಸಿದ್ದು, ಅಪಾರ ನಷ್ಟವುಂಟಾಗಿದೆ. ಆದ್ದರಿಂದ ಪ್ರತೀ ಎಕರೆಗೆ ಕನಿಷ್ಟ 20 ಸಾವಿರ ರೂ. ಪರಿಹಾರ ನೀಡಬೇಕು. ಕೊಳೆ ರೋಗದಿಂದ ನಷ್ಟ ಅನುಭವಿಸಿದ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಬೇಕು ಎಂದು ಭಾಕಿಸಂ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಸಂಘದ ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಸರಕಾರದ ಮಾರ್ಗರ್ಶನದಂತೆ ಪರಿಹಾರ ನೀಡಲಾಗುವುದು ಎಂದರು.

ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸತ್ಯನಾರಾಯಣ ಉಡುಪ, ವಾಸುದೇವ ಶ್ಯಾನುಭಾಗ್, ಉಮಾನಾಥ ರಾನಡೆ, ಗೋವಿಂದರಾಜ್ ಭಟ್, ಚಂದ್ರಹಾಸ ಶೆಟ್ಟಿ, ಹರೀಶ್ ಕುಮಾರ್, ಕೆ. ಪಿ. ಭಂಡಾರಿ, ದೀಪಕ್ ಪೈ, ಎಸ್.ಎನ್. ಭಟ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!