Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜಿನ್, ರೆಮ್ ಡಿಸಿವರ್ ಸರಬರಾಜಿಗೆ ಕ್ರಮ

ಜಿಲ್ಲೆಗೆ ಅಗತ್ಯವಿರುವ ಆಕ್ಸಿಜಿನ್, ರೆಮ್ ಡಿಸಿವರ್ ಸರಬರಾಜಿಗೆ ಕ್ರಮ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜಿನ್ ಮತ್ತು ರೆಮ್ ಡಿಸಿವರ್ ಸರಬರಾಜು ಮಾಡುವ ಕುರಿತಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತ ಪ್ರಗತಿ ಪರಿಶೀಲನ ಸಭೆ ನಡೆಸಿದರು.

ಜಿಲ್ಲೆಗೆ ಪ್ರತಿದಿನ ಅಗತ್ಯವಿರುವ ರೆಮ್ ಡಿಸಿವರ್ ಕುರಿತು ಪ್ರತಿದಿನ ವರದಿ ನೀಡಿ ಹಾಗೂ ಆಕ್ಸಿಜಿನ್ ಕೊರತೆಯಾಗದಂತೆ ನಿರಂತರ ಸರಬರಾಜು ಮತ್ತು ದಾಸ್ತಾನು ಇರುವಂತೆ ಎಚ್ಚರವಹಿಸಿ. ರೆಮ್ ಡಿಸಿವರ್ ಮತ್ತು ಆಕ್ಸಿಜನ್ ನ್ನು ಅಗತ್ಯ ಪ್ರಮಾಣದಲ್ಲಿ ಅಗತ್ಯವಿರುವ ರೋಗಿಗಳಿಗೆ ಮಾತ್ರ ನೀಡಿ. ಅನಗತ್ಯ ಪೋಲಾಗದಂತೆ ತಡೆಯಿರಿ ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ಹೋಂ ಐಸೋಲೇಶನ್ ನಲ್ಲಿರಲು ಅಗತ್ಯ ವ್ಯವಸ್ಥೆ ಇಲ್ಲದವರಿಗಾಗಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಕೂಡಲೇ ತೆರೆದು, ಅದರಲ್ಲಿ ವೈದ್ಯರು, ಶುಶ್ರೂಷಕರು ಮತ್ತು ಡಿ ಗ್ರೂಪ್ ಸಿಬ್ಬಂದಿ ನಿಯೋಜಿಸಿ. ಆಯುಷ್ ವೈದ್ಯರ ಸೇವೆಯನ್ನೂ ಬಳಸಿಕೊಳ್ಳಿ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು.

ಆರ್.ಪಿ.ಟಿ.ಪಿ.ಸಿ.ಆರ್. ವರದಿ ನೆಗಟಿವ್ ಬಂದು ರೋಗ ಲಕ್ಷಣವಿರುವವರು ಮತ್ತು ಐ.ಎಲ್.ಐ ಮತ್ತು ಸಾರಿ ಪ್ರಕರಣ ಕಂಡುಬರುವವರಿಗೆ ಬೆಡ್ ಗಳನ್ನು ಮೀಸಲಿಡಿ. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 10 ಐಸಿಯು ಬೆಡ್ ಗಳನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದ ಸಚಿವ ಬೊಮ್ಮಾಯಿ, ಮಣಿಪಾಲ ಕೆಎಂಸಿ ಮತ್ತು ಉಡುಪಿ ಟಿಎಂಎ ಪೈ ಅಸ್ಪತ್ರೆಗಳಲ್ಲಿ ಕೋವಿಡ್ ಗಾಗಿ ಮೀಸಲಿಟ್ಟಿರುವ ಐಸಿಯು ಬೆಡ್ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದರು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತಕ್ಕಾಗಿ ಮೀಸಲಿಟ್ಟಿರುವ ಬೆಡ್ ಗಳಲ್ಲಿ ಅಗತ್ಯವಿದ್ದಲ್ಲಿ ಸರ್ಕಾರದಿಂದ ನೀಡುವ ವೆಂಟಿಲೇಟರ್ ಗಳನ್ನು ಅಳವಡಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸೂಚಿಸಿದರು.
ಕೋವಿಡ್ ಲಸಿಕೆ ಎರಡನೇ ಡೋಸ್ ನ್ನು ಆದ್ಯತೆಯಲ್ಲಿ ನೀಡಲು ಕ್ರಮ ಕೈಗೊಳ್ಳಲು ತಿಳಿಸಿದ ಬೊಮ್ಮಾಯಿ, ಎರಡನೇ ಡೋಸ್ ಅಗತ್ಯವಿರುವವರ ವರದಿ ನೀಡಿದಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾಲಮಿತಿ ನಿಗದಿಪಡಿಸಿ ಎರಡನೇ ಡೋಸ್ ಪೂರ್ಣಗೊಳಿಸಲು ತಿಳಿಸಿದರು.

ಗ್ರಾಮ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವ ಕುರಿತಂತೆ ಪ್ರತಿದಿನ ನಿಗಾ ವಹಿಸುವಂತೆ ಜಿಲ್ಲಾ ಪಂಚಾಯತ್ ಸಿಇಓಗೆ ಸೂಚಿಸಿದ ಸಚಿವ ಬೊಮ್ಮಾಯಿ, ಗ್ರಾಮೀಣ ಪ್ರದೇಶದಲ್ಲಿ ಹೋಮ್ ಐಸೋಲೇಶನ್ ನಲ್ಲಿರುವವರ ಆರೋಗ್ಯದ ಬಗ್ಗೆ ಪ್ರತಿದಿನ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಅವರಿಗೆ ಆಸ್ಪತ್ರೆ ದಾಖಲಾತಿ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವ ಕುರಿತಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತು ಪ್ರತಿದಿನ ವರದಿ ನೀಡಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಸಂಪರ್ಕಿಸುವಂತೆ ಉಸ್ತುವಾರಿ ಸಚಿವ ಮೊಮ್ಮಾಯಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆಯಲ್ಲಿ ಬೆಡ್ ಗಳ ಕೊರತೆಯಾಗದಂತೆ ಪರಿಶೀಲಿಸಲು ಖಾಸಗಿ ಆಸ್ಪತ್ರೆವಾರು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಿ.ಎಸ್.ಆರ್ ನಿಧಿಯಡಿ ಮತ್ತೊಂದು ಆಕ್ಸಿಜಿನ್ ಘಟಕ ಅಳವಡಿಸಲು ಹಾಗೂ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಉಪಕರಣ ಒದಗಿಸಲಾಗುವುದು ಎಂದರು.

ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್ ಮತ್ತು ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ. ಪಂ. ಸಿಇಓ ಡಾ. ನವೀನ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿ.ಎಚ್.ಓ ಡಾ. ಸುಧೀರಚಂದ್ರ ಸೂಡ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!