Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲೆಯ ಐದೂ ಸ್ಥಾನ ಗೆಲ್ಲಲು ಬಿಜೆಪಿ ಸಜ್ಜು

ಜಿಲ್ಲೆಯ ಐದೂ ಸ್ಥಾನ ಗೆಲ್ಲಲು ಬಿಜೆಪಿ ಸಜ್ಜು

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಜಿಲ್ಲೆಯ ಐದೂ ಸ್ಥಾನ ಗೆಲ್ಲಲು ಬಿಜೆಪಿ ಸಜ್ಜು
ಉಡುಪಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದು, ಉಡುಪಿ ಜಿಲ್ಲೆಯ ಐದೂ ಸ್ಥಾನಗಳನ್ನು ಮತ್ತೊಮ್ಮೆ ಗೆಲ್ಲಲಿದೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ವೇಗ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕರ್ತರ ಸಹಕಾರ ಅಗತ್ಯ
ಎಲ್ಲಾ ಚುನಾವಣೆಗಳನ್ನು ಬಿಜೆಪಿ, ಸಂಘಟನಾ ಸಾಮರ್ಥ್ಯದಿಂದ ಗೆಲ್ಲುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ 1,111 ಬೂತ್ ಗಳಲ್ಲಿ ಬೂತ್ ಸಶಕ್ತೀಕರಣ, ಶಕ್ತಿ ಕೇಂದ್ರ ಪ್ರಮುಖರ ಸಭೆ ಹಾಗೂ ಮನೆ ಮನೆ ಭೇಟಿ ಅಭಿಯಾನ ನಡೆಯಲಿದೆ.

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಪ್ರತೀ ಮನೆಗಳಲ್ಲಿ ಆಗಸ್ಟ್ 11ರಿಂದ 17ರ ವರೆಗೆ ರಾಷ್ಟ್ರಧ್ವಜ ಅರಳಿಸುವ ಮೂಲಕ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಗೌರವಿಸುವ ಕೇಂದ್ರ ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕುಯಿಲಾಡಿ ಮನವಿ ಮಾಡಿದರು.

ಕಾರ್ಯಕರ್ತ ಆಧರಿತ ಪಕ್ಷ
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಾರ್ಯಕರ್ತ ಆಧಾರಿತ ರಾಜಕೀಯ ಪಕ್ಷವಾಗಿರುವ ಬಿಜೆಪಿ, ಇಂದು ದೇಶದ ಎಲ್ಲ ಸ್ತರಗಳಲ್ಲಿ ಅಭಿವೃದ್ಧಿ ಪರ ಆಡಳಿತ ನಡೆಸುತ್ತಿದೆ.

ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರ ಹಾಗೂ 150 ವಿಧಾನಸಭಾ ಕ್ಷೇತ್ರದ ಗೆಲುವಿನ ಗುರಿ ಹೊಂದಿರುವ ರಾಜ್ಯ ಬಿಜೆಪಿ ಸಂಘಟನಾತ್ಮಕವಾಗಿ 9 ವಿಭಾಗಗಳಡಿ ಪಕ್ಷದ ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿ ನೀಡಿದೆ.

ಬೂತ್ ಸಶಸ್ತೀಕರಣ ಸಹಿತ ಪಕ್ಷದ ನಿಗದಿತ ಕಾರ್ಯಚಟುವಟಿಕೆಗಳನ್ನು ಬದ್ಧತೆಯಿಂದ ನಿರ್ವಹಿಸುವ ಜೊತೆಗೆ ಬೂತ್, ಮಂಡಲ ಮತ್ತು ಜಿಲ್ಲಾ ಸಮಾವೇಶದ ಮೂಲಕ ಪಕ್ಷದ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಪಕ್ಷ ಸಂಘಟನೆಗೆ ಶಕ್ತಿ ತುಂಬಿ ಬಿಜೆಪಿ ವಿಜಯ ಪತಾಕೆಯನ್ನು ಬಾನೆತ್ತರಕ್ಕೇರಿಸಲು ಕೈಜೋಡಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಸಂಘಟನಾತ್ಮಕ ವಿಚಾರಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು, ರಾಜ್ಯ ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಇದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ನಿರೂಪಿಸಿ, ಮನೋಹರ್ ಎಸ್. ಕಲ್ಮಾಡಿ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!