Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಕಠಿಣ ಪರಿಶ್ರಮದಿಂದ ಯಶಸ್ಸು

ಕಠಿಣ ಪರಿಶ್ರಮದಿಂದ ಯಶಸ್ಸು

ಕಠಿಣ ಪರಿಶ್ರಮದಿಂದ ಯಶಸ್ಸು

ಉಡುಪಿ: ಕಠಿಣ ಪರಿಶ್ರಮದಿಂದ ಉತ್ತಮ ಯಶಸ್ಸು ಲಭಿಸುವುದು ಸಾಧ್ಯ ಎಂದು ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ಮಹಾಪ್ರಬಂಧಕ ರಾಮಾ ನಾಯ್ಕ್ ಹೇಳಿದರು.

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ವತಿಯಿಂದ 115ನೇ ಸಂಸ್ಥಾಪಕರ ದಿನ ಅಂಗವಾಗಿ ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಹಾಲ್ ನಲ್ಲಿ ನಡೆದ ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಶಿಷ್ಯ ವೇತನ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಬದುಕಿನ ಸಾಧನೆಯ ಕನಸಿನೊಂದಿಗೆ ಹೆಚ್ಚಿನ ಸಮಯವನ್ನು ಓದು, ಅಧ್ಯಯನದ ಮೂಲಕ ಜ್ಞಾನಾರ್ಜನೆಗೆ ಮೀಸಲಿಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ಎಚ್. ನಾಗೂರ್, ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಿ ಅವಕಾಶಗಳ ಸದ್ಬಳಕೆ ಮಾಡಬೇಕು. ಕೊರೊನಾ ಹಿನ್ನೆಲೆಯಲ್ಲಿ ಆರೋಗ್ಯದ ಕಾಳಜಿಯೊಂದಿಗೆ ಕಲಿಕೆ ನಿರಂತರವಾಗಬೇಕು ಎಂದು ಆಶಿಸಿದರು.

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ಡಿಜಿಎಂ ಪ್ರದೀಪ್ ರಾಮಚಂದ್ರ ಭಕ್ತ, ಮಕ್ಕಳಲ್ಲಿ ವಿದ್ಯೆಯ ಜ್ಯೋತಿ, ಅಂತಃಶಕ್ತಿ ಬೆಳಗಬೇಕು. ಛಲ, ಧೈರ್ಯದಿಂದ ಮುನ್ನಡೆದಲ್ಲಿ ನಿಗದಿತ ಗುರಿ ಸಾಧನೆ ಸಾಧ್ಯ.ಮಕ್ಕಳಿಗೆ ಧ್ರುವ, ಪ್ರಹ್ಲಾದ, ನಚಿಕೇತ ಮೊದಲಾದವರ ಛಲ ಬದುಕಿನ ಸಾಧನೆಗೆ ಮಾದರಿಯಾಗಬೇಕು. ಅದ್ಭುತ ಸೃಷ್ಟಿಸಬಲ್ಲ ತಾಕತ್ತು ಮಕ್ಕಳಲ್ಲಿ ಹೆಚ್ಚಬೇಕು. ವಿದ್ವಾಂಸರಿಗೆ ಎಲ್ಲೆಡೆ ಗೌರವ, ಸ್ಥಾನಮಾನವಿದ್ದು ಇಂದಿನ ಮಕ್ಕಳು ಭವಿಷ್ಯದ ಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು ಎಂದರು.

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ಮಹಾಪ್ರಬಂಧಕ ಸಾಯಿರಾಂ ಹೆಗ್ಡೆ, ಉಡುಪಿ ಪ್ರಾದೇಶಿಕ ಕಚೇರಿ 2ರ ಸಹಾಯಕ ಮಹಾಪ್ರಬಂಧಕ ಕೆ. ಕಾಳಿ ಮಾತನಾಡಿದರು.

ವಿಷ್ಣುದಾಸ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿಂಗೇ ಗೌಡ ನಿರೂಪಿಸಿದರು.

42 ಮಂದಿ ವಿದ್ಯಾರ್ಥಿನಿಯರಿಗೆ 1.92 ಲಕ್ಷ ರೂ. ಶಿಷ್ಯವೇತನ ಮಂಜೂರಾಗಿದ್ದು, 24 ಮಂದಿಗೆ (5ರಿಂದ 7ನೇ ತರಗತಿ: 2,500 ರೂ., 8ರಿಂದ 10ನೇ ತರಗತಿ: 5,000 ರೂ.) ಹಸ್ತಾಂತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!