ಸುದ್ದಿಕಿರಣ ವರದಿ
ಭಾನುವಾರ, ಜುಲೈ 3
ಕಡಲಿಗುರುಳಿದ ಕಾರು: ಇಬ್ಬರು ಸಾವು
ಕುಂದಾಪುರ: ಮರವಂತೆ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಸಮುದ್ರಕ್ಕೆ ಬಿದ್ದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ
ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ವಿರಾಜ್ (28) ಮತ್ತು ಕೌಶಿಕ್ ಎಂದು ಗುರುತಿಸಲಾಗಿದ್ದು, ಕಾರ್ತಿಕ್ ಮತ್ತು ಸಂದೇಶ್ ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ 1ರಿಂದ 2 ಗಂಟೆ ಮಧ್ಯೆ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ.
ಕುಂದಾಪುರದಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಮಾರುತಿ ಶಿಫ್ಟ್ ಕಾರು ಮರವಂತೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿಯಿಂದ ಹಾರಿ ಮರವಂತೆಯ ಸಮುದ್ರ ತಡೆಗೋಡೆಯನ್ನು ದಾಟಿ ಸಮುದ್ರಕ್ಕೆ ಬಿದ್ದಿದೆ.
ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರ ಶವಗಳನ್ನು ಇಂದು ಬೆಳಗ್ಗೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರ ಸಹಾಯದಿಂದ ಹೊರತೆಗೆಯಲಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ವಿನಯ್ ಹಾಗೂ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದವರು ಭೇಟಿ ಭೇಟಿ ನೀಡಿದ್ದಾರೆ.
ರಾತ್ರಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮತ್ತು ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.