ಸುದ್ದಿಕಿರಣ ವರದಿ
ಶನಿವಾರ, ಜುಲೈ 9
ಅಮರನಾಥ ಮೇಘಸ್ಪೋಟ: ಕನ್ನಡಿಗರ ರಕ್ಷಣೆಗೆ ಕ್ರಮ
ಬೆಂಗಳೂರು: ಅಮರನಾಥದಲ್ಲಿ ಮೇಘಸ್ಪೋಟದಿಂದ 15 ಮಂದಿ ಸಾವನ್ನಪ್ಪಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 100ಕ್ಕೂ ಹೆಚ್ಚು ಮಂದಿ ಕನ್ನಡಿಗರು ಅಮರನಾಥ ಯಾತ್ರೆಯಲ್ಲಿದ್ದಾರೆ. ಕನ್ನಡಿಗರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ತಮ್ಮ ನಿವಾಸದ ಬಳಿ ಸುದ್ದಗಿಗಾರರೊಂದಿಗೆ ಮಾತನಾಡಿದರು.
ರಾಜ್ಯದಿಂದ ಅಮರನಾಥ ಯಾತ್ರೆ ಕೈಗೊಂಡಿದ್ದ ಕನ್ನಡಿಗರು ಸುರಕ್ಷಿತವಾಗಿದ್ದು, ಯಾವ ಅಹಿತರಕರ ಸುದ್ದಿ ಬಂದಿಲ್ಲ. ಅಲ್ಲಿಯ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ.
ರಕ್ಷಣಾ ಕಾರ್ಯಕ್ಕಾಗಿ ಸಹಾಯವಾಣಿಯನ್ನೂ ತೆರೆಯಲಾಗಿದೆ. ಸಹಾಯವಾಣಿ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿದೆ.
ಈಗಾಗಲೇ 15- 20 ಮಂದಿ ಕರೆ ಮಾಡಿ ತಾವು ಸಿಲುಕಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯವನ್ನು ಕೂಡಲೇ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರ, ಗಡಿ ರಕ್ಷಣಾ ಪಡೆ, ಇಂಡಿಯನ್ ಟಿಬೆಟ್ ಫೋರ್ಸ್ ಎಲ್ಲರೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮುಖ್ಯ ಕಾರ್ಯದರ್ಶಿ ನೇರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ತೊಂದರೆಗೆ ಸಿಲುಕಿರುವವರು ಸಹಾಯವಾಣಿಗೆ ಕರೆ ಮಾಡಿದಲ್ಲಿ ಕೂಡಲೇ ರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದರು.
ಸಹಾಯವಾಣಿ ವಿವರ
ಎನ್.ಡಿ.ಆರ್.ಎಫ್: 011-23438252, 011-23438253
ಕಶ್ಮೀರ್ ಡಿವಿಷನಲ್ ಹೆಲ್ಪ್ ಲೈನ್: 0914- 2496240
ದೇವಸ್ಥಾನ ಮಂಡಳಿಯ ಸಹಾಯವಾಣಿ: 0194-2313149
ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676