Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಕನ್ನಡ ಭವನ ನಿರ್ಮಾಣದ ಗುರಿ

ಕನ್ನಡ ಭವನ ನಿರ್ಮಾಣದ ಗುರಿ

ಉಡುಪಿ: ಮೂರನೇ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ನೀಲಾವರ ಸುರೇಂದ್ರ ಅಡಿಗ, ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದಾರೆ. ಈ ಬಾರಿ ಆಯ್ಕೆಯಾದಲ್ಲಿ ಕನ್ನಡ ಭವನ ನಿರ್ಮಾಣವನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಹುಕಾಲದ ಬೇಡಿಕೆಯಾದ ಕನ್ನಡ ಭವನಕ್ಕೆ 2 ತಿಂಗಳಲ್ಲಿ ಸರ್ಕಾರದ ಅನುದಾನ ಲಭಿಸದಿದ್ದಲ್ಲಿ ದಾನಿಗಳಿಂದ ಧನ ಸಂಗ್ರಹಿಸಿ ಗ್ರಂಥಾಲಯ, ಇ- ಗ್ರಂಥಾಲಯ ಸಹಿತ 3 ಕೋ. ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಸರ್ಕಾರದಿಂದ ಜಾಗ ಮಂಜೂರಾಗಿದ್ದು, ನೀಲನಕ್ಷೆ ಸಿದ್ಧವಾಗಿದೆ ಎಂದರು.

ತನ್ನ ಕಾರ್ಯಾವಧಿಯಲ್ಲಿ 1,876 ಕನ್ನಡ ಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು, 25 ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ, 4 ಜಿಲ್ಲಾ ಮಟ್ಟದ ಸಮ್ಮೇಳನ ನಡೆಸಲಾಗಿದೆ. ದತ್ತಿನಿಧಿ ಸಂಖ್ಯೆ 6ರಿಂದ 13ಕ್ಕೆ ಏರಿಕೆಯಾಗಿದೆ. ಆ ಮೂಲಕ 3.55 ಲಕ್ಷ ರೂ. ಜಮೆಯಾಗಿದೆ. 117 ಮಂದಿ ಹಿರಿಯರನ್ನು ಅವರ ಮನೆಗೇ ತೆರಳಿ ಅಭಿನಂದಿಸಲಾಗಿದೆ. ಸಾಹಿತ್ಯ ಪರಿಷತ್ ನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ ಎಂದರು.

ಕಸಾಪ ಸದಸ್ಯರಾದ ಶಾಂತರಾಜ ಐತಾಳ್, ಉಪೇಂದ್ರ ಸೋಮಯಾಜಿ, ನಿತ್ಯಾನಂದ ಪೈ, ಸುಬ್ರಹ್ಮಣ್ಯ ಶೆಟ್ಟಿ, ಪ್ರಭಾಕರ ಶೆಟ್ಟಿ, ಪುಂಡಲೀಕ ಮರಾಠೆ, ದೇವದಾಸ ಹೆಬ್ಬಾರ್, ಸಾಹಿತಿ ಕು. ಗೋ. ಇದ್ದರು.

ಅದಕ್ಕೂ ಮೊದಲು ಉಡುಪಿ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ನಾಮಪತ್ರ ಸಲ್ಲಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!