ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6
ಸುಲಿಗೆ, ಕಳವು ಪ್ರಕರಣ: ಮೂವರ ಬಂಧನ
ಉಡುಪಿ: ಸುಲಿಗೆ, ಮನೆ ಕಳವು ಹಾಗೂ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬಜ್ಪೆ ಕುರ್ಸುಗುಡ್ಡೆ ನಿವಾಸಿ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ (37), ಮಹಮ್ಮದ್ ಮುನೀರ್ (24) ಮತ್ತು ಅಕ್ಬರ್ (36) ಎಂದು ಗುರುತಿಸಲಾಗಿದೆ.
ಕಾಪು ವೃತ್ತ ಸರಹದ್ದಿನ ನಂದಿಕೂರು ಯು.ಪಿ.ಸಿ.ಎಲ್. ಬಳಿಯ ಮನೆಯಲ್ಲಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ ಪಣಿಯೂರಿಗೆ ಹೋಗುವ ದಾರಿಯಲ್ಲಿರುವ ಮನೆಯೊಂದರಿಂದ 2.52 ಲಕ್ಷ ರೂ. ಕಳವು, ಪಡುಬಿದ್ರಿ, ಉಚ್ಚಿಲ, ಕಟಪಾಡಿಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಡುಬಿದ್ರಿ ಮತ್ತು ಕಾಪು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು.
ಕಾರ್ಕಳ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 2 ಪವನ್ ತೂಕದ ಚಿನ್ನದ ಸರ, ಮೊಬೈಲ್ ಪೋನ್ 1, ನಗದು 61 ಸಾವಿರ ರೂ., ಕಳವು ಮಾಡಿದ 3 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ 1, ಮೋಟಾರು ಸೈಕಲ್ 1 ಹಾಗೂ ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,99,190 ರೂ. ಆಗಿದೆ.
ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ ವಿರುದ್ಧ ಬ್ರಹ್ಮಾವರ, ಮೂಲ್ಕಿ, ಬಜ್ಪೆ, ಮಂಗಳೂರು ಗ್ರಾಮಾಂತರ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯಲ್ಲಿ 5 ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಆತನ ವಿರುದ್ಧ ಒಟ್ಟು 18 ಪ್ರಕರಣಗಳು ದಾಖಲಾಗಿದೆ.
ಮಹಮ್ಮದ್ ಮುನೀರ್ ವಿರುದ್ಧ ಬ್ರಹ್ಮಾವರ ಹಾಗೂ ಹಾಸನ ಸಿಟಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳಿದ್ದು, ತಲೆಮರೆಸಿಕೊಂಡಿದ್ದ ಆತನ ವಿರುದ್ಧ 8 ಪ್ರಕರಣಗಳಿವೆ.
ಅಕ್ಬರ್ ವಿರುದ್ಧ 2 ಪ್ರಕರಣ ದಾಖಲಾಗಿದೆ ಎಂದು ಎಸ್.ಪಿ. ವಿಷ್ಣುವರ್ಧನ್ ತಿಳಿಸಿದ್ದಾರೆ.