ಕಾರ್ಕಳ: ಕುರಾನ್ ಇಸ್ಲಾಮ್ ಧರ್ಮದ ಆಶಯಗಳನ್ನು ಜಗತ್ತಿಗೆ ನೀಡಲು ದೇವಾನುಗ್ರಹದಿಂದ ನೀಡಲ್ಪಟ್ಟ ದೇವಗ್ರಂಥವಾಗಿದ್ದು, ಅದು ಪರಿಶುದ್ಧ ಮತ್ತು ಪರಿಪೂರ್ಣವಾಗಿದೆ. ಮನುಷ್ಯ ಮಾತ್ರರಿಂದ ಅದರ ಮೇಲಿನ ದಾಳಿ, ತಿದ್ದುವಿಕೆ ಮತ್ತು ಅರ್ಥ ಬದಲಿಸುವುದು ಅಸಾಧ್ಯವಾಗಿದ್ದು, ಅಂಥ ದುಷ್ಪ್ರಯತ್ನ ವಿಫಲವಾಗಿದೆ. ಅಜ್ಞಾನಿಗಳ ಇಂಥ ಯತ್ನ ಎಂದಿಗೂ ಯಶಸ್ಸು ಕಾಣುವುದಿಲ್ಲ ಎಂದು ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು.
ಇಲ್ಲಿನ ಬಂಗ್ಲೆಗುಡ್ಡೆ ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ ಆಶ್ರಯದಲ್ಲಿ ತ್ವೆಯ್ಬಾ ಗಾರ್ಡನ್ ನಲ್ಲಿ ನಡೆದ ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಮನುಷ್ಯನ ಚಿಂತನೆಗಳಿಗೂ ಅನೂಹ್ಯವಾದ ರೀತಿಯಲ್ಲಿ ಭೂಮಿ, ಆಕಾಶಗಳಲ್ಲಿ ಸಮರ್ಥವಾದ ರೀತಿಯಲ್ಲಿ ಕುರಾನ್ ರೂಪುಗೊಂಡಿದ್ದು, ಅಲ್ಲಾಹುವಿನ ಆಜ್ಞೆ, ನಿಯಮ, ನೀತಿಬೋಧೆ ಇಹ ಮತ್ತು ಪರಲೋಕಗಳ ಮಾರ್ಗದರ್ಶಕವಾಗಿದೆ. ವ್ಯತಿರಿಕ್ತ ಮನಸ್ಥಿತಿಯಿಂದ ಕುರಾನಿನಲ್ಲಿ ಮಾನವನ ಹಸ್ತಕ್ಷೇಪವನ್ನು ಇಸ್ಲಾಮ್ ದೇವಮಾರ್ಗದರ್ಶನದಂತೆ ನಿಷೇಧಿಸಿದೆ. ಪವಿತ್ರ ಗ್ರಂಥದ ರಕ್ಷಣೆಯ ಜವಾಬ್ದಾರಿಯನ್ನೂ ಅಲ್ಲಾಹುವೇ ನಿಭಾಯಿಸುತ್ತಾನೆ ಎಂದರು.
ಸುನ್ನಿ ವಿದ್ವಾಂಸ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಶೈಕ್ಷಣಿಕ ರಂಗದಲ್ಲಿ ಶ್ರೇಷ್ಠ ಪ್ರಯತ್ನ ಕಳೆದ ದಶಕಗಳಲ್ಲಿ ಆಮೂಲಾಗ್ರ ಬದಲಾವಣೆಗಳಿಗೆ ಕಾರಣವಾಗಿದ್ದು, ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿಯ ಪರಿಶ್ರಮ ಗಮನೀಯ ಎಂದರು.
ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಧಾರ್ಮಿಕ ಉಪನ್ಯಾಸ ನೀಡಿದರು.
ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ ಸಂಚಾಲಕ ಅಸ್ಸಯ್ಯಿದ್ ಅಬ್ದರ್ರಹ್ಮಾನ್ ಸಾದಾತ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಶಾಕಿರ್ ಹಾಜಿ ಮಂಗಳೂರು, ಉಡುಪಿ ಜಿಲ್ಲಾ ಸಹಾಯಕ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು, ಎಸ್. ವೈ. ಎಸ್ ರಾಜ್ಯ ಕಾರ್ಯದರ್ಶಿ ಕೆ. ಎಂ. ಅಬೂಬಕ್ಕರ್ ಸಿದ್ದೀಕ್, ಅಬೂಸೂಪ್ಯಾನ್ ಎಚ್. ಐ. ಇಬ್ರಾಹಿಮ್ ಮದನಿ ಮೂಡುಬಿದಿರೆ, ಆಲೂರು ಮರ್ಕಝ್ ಮಿಸ್ಕಾತುಲ್ ಹಸನಾತ್ ಅಧ್ಯಕ್ಷ ಅಸ್ಸಯ್ಯಿದ್ ಜಾಬಿರ್ ತಂಙಳ್, ಹೊಸ್ಮಾರು ಜಮಾಅತ್ ಅಧ್ಯಕ್ಷ ಎಂ. ಎಚ್. ಸುಲೈಮಾನ್ ಸಅದಿ ಅಲ್ ಅಫ್ಳಲಿ, ಹೊಸ್ಮಾರು ಖತೀಬ ಉಮರ್ ಸಅದಿ ಅಲ್ ಅಫ್ಳಲಿ, ಮುಹಮ್ಮದ್ ಹಾಜಿ ಬಂಗ್ಲೆಗುಡ್ಡೆ, ಅಶ್ಫಾಕ್ ಅಹ್ಮದ್, ರಜಬ್ ಹಾಜಿ ಬಂಗ್ಲೆಗುಡ್ಡೆ, ಆಸೀಫ್ ಇದ್ದರು.
ಸಂಸ್ಥೆ ಪ್ರಾಂಶುಪಾಲ ಶರೀಫ್ ಸಅದಿ ಅಲ್ ಕಾಮಿಲ್ ಕಿಲ್ಲೂರು ಸ್ವಾಗತಿಸಿದರು. ತ್ವೆಬಾ ಗಾರ್ಡನ್ ಕಾರ್ಯದರ್ಶಿ ಮುಹಮ್ಮದ್ ಶರೀಫ್ ವಂದಿಸಿದರು.