Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಕೃಷಿ ಮೂಲಭೂತ ಸೌಕರ್ಯಕ್ಕೆ 1.30 ಲಕ್ಷ ಕೋ. ಮೀಸಲು

ಕೃಷಿ ಮೂಲಭೂತ ಸೌಕರ್ಯಕ್ಕೆ 1.30 ಲಕ್ಷ ಕೋ. ಮೀಸಲು

ಕೃಷಿ ಮೂಲಭೂತ ಸೌಕರ್ಯಕ್ಕೆ 1.30 ಲಕ್ಷ ಕೋ. ಮೀಸಲು

(ಸುದ್ದಿಕಿರಣ ವರದಿ)
ಉಡುಪಿ: ಕೃಷಿ ಮೂಲಭೂತ ಸೌಕರ್ಯಕ್ಕೆ ಕೇಂದ್ರ ಬಜೆಟ್ನಲ್ಲಿ 1.30 ಲಕ್ಷ ಕೋ. ರೂ. ಮೀಸಲಿರಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಗುರವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಾವು ಸೇವಿಸುವ ಖಾದ್ಯ ತೈಲ ಕಲಬೆರಕೆಯದ್ದು. ಹಾಗಾಗಿ ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಎಣ್ಣೆ ಬೀಜ ಬೆಳೆಸಲು ಉತ್ತೇಜಿಸಲಾಗುತ್ತಿದೆ. ಸಣ್ಣ ಉದ್ದಿಮೆ ಆರಂಭಿಸಲು ನೆರವು ನೀಡಲಾಗುವುದು ಎಂದರು.

ಅರಣ್ಯ ಇಲಾಖೆ ಕಠಿಣ ಕಾನೂನುಗಳಿಂದ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆಸಿದ ಮರ ಕಡಿಯಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಅದರಿಂದ ರೈತರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲ ರೀತಿಯ ಮರಗಳನ್ನು ಕಡಿದು ಸಾಗಾಟ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈಗಿರುವ ಕಾಯ್ದೆ ಸಡಿಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಟೀಕಿಸುವ ಹಕ್ಕಿಲ್ಲ
ನರೇಂದ್ರ ಮೋದಿ ಈಗ ವಿಶ್ವಸಂಸ್ಥೆಗೆ ಹೋದರೆ ಎಲ್ಲ ದೇಶಗಳೂ ಗೌರವ ಕೊಡುತ್ತಿವೆ. ಹಿಂದಿನ ಪ್ರಧಾನಿಗೆ ಗೌರವ ಸಿಗುತ್ತಿರಲಿಲ್ಲ. ಮೋದಿ ಅಧಿಕಾರದಿಂದ ನಿರ್ಗಮಿಸುವಾಗ ಕೇವಲ ತಮ್ಮ ಬಟ್ಟೆಗಳಿರುವ ಸೂಟ್ ಕೇಸ್ ನೊಂದಿಗೆ ಮಾತ್ರ ನಿರ್ಗಮಿಸುತ್ತಾರೆ. ಭ್ರಷ್ಟಾಚಾರ ನಡೆಸಿದವರಿಗೆ ಅವರನ್ನು ಟೀಕಿಸುವ ಹಕ್ಕಿಲ್ಲ ಎಂದರು.

ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ತನ್ನ ಸಂಪುಟದ ಸದಸ್ಯರನ್ನು ಲೋಕಸಭೆಗೆ ಪರಿಚಯಿಸಿಕೊಡಲು ವಿಪಕ್ಷಗಳು ಪ್ರಧಾನಿಗೆ ಅವಕಾಶ ಮಾಡಿಕೊಡಲಿಲ್ಲ. ಹಾಗಾಗಿ ಜನರ ಮುಂದೆ ಹೊಸ ಮಂತ್ರಿಗಳನ್ನು ಪರಿಚಯಿಸಿಕೊಡಲು ಈ ಯಾತ್ರೆ ಆಯೋಜಿಸಲಾಗಿದೆ ಎಂದರು.

ಶಾಸ್ತ್ರಿ ಹೊರತುಪಡಿಸಿ ಮಿಕ್ಕವರೆಲ್ಲರೂ ಭ್ರಷ್ಟಾಚಾರಿಗಳು
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ತನ್ನ ಏಳು ವರ್ಷ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲದೆ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡಿದೆ. ಆದರೆ ಲಾಲ್ ಬಹುದ್ದೂರ್ ಶಾಸ್ತ್ರಿ ಒಬ್ಬರನ್ನು ಹೊರತುಪಡಿಸಿ ನೆಹರೂ ಅವರಿಂದ ತೊಡಗಿ ಮನಮೋಹನ್ ಸಿಂಗ್ ವರೆಗೆ ಎಲ್ಲ ಕಾಂಗ್ರೆಸ್ ಪ್ರಧಾನಿಗಳು ಭ್ರಷ್ಟಾಚಾರಿಗಳಾಗಿದ್ದಾರೆ ಎಂದರು.

ದೇಶದಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಬದಲಾವಣೆ ಆಗುತ್ತಿದೆ. ಈ ಪರಿವರ್ತನೆಯ ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದೇ ಜನಾಶೀರ್ವಾದ ಕಾರ್ಯಕ್ರಮದ ಉದ್ದೇಶ.
ಜನಾಶೀರ್ವಾದ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ನಳಿನ್ ಭರವಸೆ ನೀಡಿದರು.

ಕಾಂಗ್ರೆಸ್ ರಾಷ್ಟ್ರಭಕ್ತಿಯ ಪಕ್ಷವಲ್ಲ
ಅಧಿವೇಶನದಲ್ಲಿ ಕೇಂದ್ರ ಸರಕಾರದ ಎಲ್ಲ ಯೋಜನೆಗಳನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ದೇಶದ ಮೇಲೆ ಚೀನಾ ದಾಳಿ ಮಾಡಿದಾಗ ರಾಹುಲ್ ಗಾಂಧಿ ತಮಾಷೆ ಮಾಡುತ್ತಾರೆ. ಆದ್ದರಿಂದ ಕಾಂಗ್ರೆಸ್ ರಾಷ್ಟ್ರ ವಿರೋಧಿ ಪಕ್ಷವೇ ಹೊರತು ರಾಷ್ಟ್ರಭಕ್ತಿಯ ಪಕ್ಷ ಅಲ್ಲ. ಅದು ಕಾಂಗ್ರೆಸ್ ವಿರೋಧಕ್ಕಾಗಿ ವಿರೋಧ ಪಕ್ಷವಾಗಿದೆ ಎಂದರು.

ಇಂದು ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಅಜಾತಶತ್ರು ಎಂದು ಕರೆಸಿಕೊಳ್ಳುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಕಾಂಗ್ರೆಸ್ ಕೆಟ್ಟದಾಗಿ ಮಾತನಾಡುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಚತುಷ್ಪಥ ರಸ್ತೆಗಳನ್ನು ಅಟಲ್ ಬಿಹಾರಿ ವಾಜಪೇಯಿ ನಿರ್ಮಾಣ ಮಾಡಿದ್ದರು. ಆದರೆ, ಅವರು ಎಂದೂ ಅದನ್ನು ವಾಜಪೇಯಿ ರಸ್ತೆ ಎಂದು ಕರೆಯುತ್ತಿರಲಿಲ್ಲ. ಬದಲಾಗಿ ಜನರೇ ಆ ರಸ್ತೆಗಳನ್ನು ವಾಜಪೇಯಿ ರಸ್ತೆ ಎಂದು ಕರೆದರು.

ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯವರು ಅಟಲ್ ಬಿಹಾರಿ ವಾಜಪೇಯಿ ಭಾವಚಿತ್ರಗಳನ್ನು ಹೆದ್ದಾರಿಗೆ ಅಳವಡಿಸಿದರು. ಆದರೆ, ಯುಪಿಎ ಸರಕಾರ ಬಂದ ಮೇಲೆ ಎಲ್ಲಾ ಭಾವಚಿತ್ರಗಳನ್ನು ತೆಗೆದುಹಾಕಿದರು. ಅಲ್ಲದೆ, ಯಡಿಯೂರಪ್ಪ ಸರಕಾರ ಇದ್ದಾಗ ಜಾರಿಗೆ ತಂದಿದ್ದ ಅಟಲ್ ಸಾರಿಗೆ ವ್ಯವಸ್ಥೆಯನ್ನು ಸಿದ್ದರಾಮಯ್ಯ ಸರಕಾರ ಬಂದ ಮರುದಿನವೇ ತೆಗೆದು ಹಾಕಿದರು ಎಂದು ನಳಿನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಾದ ರಘುಪತಿ ಭಟ್, ಸುಕುಮಾರ್ ಶೆಟ್ಟಿ ಮತ್ತು ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜೇ ಗೌಡ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿ. ಪಂ. ಮಾಜಿ ಅಧ್ಯಕ್ಷ ದಿನಕರ್ ಬಾಬು, ಜಿ. ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಪಕ್ಷ ಪ್ರಮುಖರಾದ ಯಶಪಾಲ್ ಸುವರ್ಣ, ಕಿರಣ್ ಕೊಡ್ಗಿ, ಗೀತಾಂಜಲಿ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಶಿಲ್ಪಾ ಜಿ. ಸುವರ್ಣ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಸಚಿವೆ ಶೋಭಾ ಅವರನ್ನು ಗೌರವಿಸಲಾಯಿತು.

ಬಳಿಕ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಸಚಿವೆ ಶೋಭಾ, ಅವರೊಂದಿಗೆ ಭೋಜನ ಸವಿದರು.

ಉಡುಪಿ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿದರು. ಬಳಿಕ ಬ್ರಹ್ಮಾವರ ಪಡಿತರ ಕೇಂದ್ರಕ್ಕೆ ಭೇಟಿ ನೀಡಿದರು.

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಉದ್ಘಾಟಿಸಿದರು. ಆ ಮೂಲಕ ಜನಾಶೀರ್ವಾದ ಯಾತ್ರೆ ಸಮಾಪನಗೊಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!