Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಜು.3: ಕೇರಳ ರಾಜ್ಯಕ್ಕೆ ಕಾಶಿ ಜಗದ್ಗುರು ಭೇಟಿ

ಜು.3: ಕೇರಳ ರಾಜ್ಯಕ್ಕೆ ಕಾಶಿ ಜಗದ್ಗುರು ಭೇಟಿ

ಸುದ್ದಿಕಿರಣ ವರದಿ
ಬುಧವಾರ, ಜೂನ್ 1

ಜು.3: ಕೇರಳ ರಾಜ್ಯಕ್ಕೆ ಕಾಶಿ ಜಗದ್ಗುರು ಭೇಟಿ

ವಾರಣಾಸಿ: ಕಾಶಿ ಜ್ಞಾನಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಜಂಗಮವಾಡಿ ಮಠ ವಾರಣಾಸಿ ಜುಲೈ 3ರಂದು ಕೇರಳಕ್ಕೆ ಆಗಮಿಸಲಿದ್ದು, 4ರಂದು ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದ ಭರಣಿಕಾವಾದಲ್ಲಿರುವ ಪನಪ್ಪೆಟ್ಟಿಗೆ ಆಗಮಿಸುವರು.

ಅಂದು ಮುಂಜಾನೆ 6 ಗಂಟೆಗೆ ಕಾಶಿ ಶ್ರೀ ವಿಶ್ವೇಶ್ವರ ಲಿಂಗ ಪ್ರತಿಷ್ಠಾಪನೆ ಮಾಡುವರು. ಈ ದೇವಾಲಯ ವಿಶಿಷ್ಟವಾಗಿದ್ದು ಎಲ್ಲ ಜಾತಿ ಪಂಥದವರೂ ಶಿವ ಲಿಂಗ ಪೂಜಿಸಬಹುದು. ಜೊತೆಗೆ ಅಧಿದೇವತೆ ಗಣಪತಿ ಹಾಗೂ ನಾಗರಾಜಮೂರ್ತಿ ಪ್ರತಿಷ್ಠಾಪನೆ ಕಾರ್ಯವೂ ನಡೆಯಲಿದೆ. 7 ಗಂಟೆಯ ನಂತರ ಸಾಮೂಹಿಕ ಶಿವ ದೀಕ್ಷೆ ನೆಡಯಲಿದೆ.

ಕಾಶಿ ಮಠದ ಕೇರಳ ವೀರಶೈವ ಮಠದ ಉದ್ಘಾಟನೆಯನ್ನೂ ಜಗದ್ಗುರುಗಳು ಈ ಸಂದರ್ಭದಲ್ಲಿ ನೆರವೇರಿಸಲಿದ್ದಾರೆ.

ರಾಜ್ಯ ಸರ್ಕಾರದ ನೆರವಿನೊಂದಿಗೆ ವೀರಶೈವ ಬಸವೇಶ್ವರ ಪೀಪಲ್ಸ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪ್ರಾರಂಭವಾದ ಬಸವೇಶ್ವರ ಸಾಂಸ್ಕೃತಿಕ ಕೇಂದ್ರದಲ್ಲಿ ಬಸವೇಶ್ವರ ಪಾರ್ಕ್ ಮತ್ತು ಮ್ಯೂಸಿಯಂ, ನವೋದಯ ಉದ್ಯಾನವನ ತೆರೆಯಲಾಗಿದೆ. ಅಲ್ಲಿ ಆಯುರ್ವೇದ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ ಇದೆ.

ವೀರಶೈವ ಪಂಚಪೀಠಗಳಲ್ಲಿ ಒಂದಾದ ಕಾಶಿಯಲ್ಲಿರುವ ಜಂಗಮವಾಡಿ ಮಠದ ಶಾಖೆಯಾಗಿ ಕೇರಳ ವೀರಶೈವ ಮಠ ನಿರ್ಮಾಣವಾಗಲಿದೆ.

ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಕೇರಳಕ್ಕೆ ಭೇಟಿ ನೀಡುವುದು ಇದು ಮೂರನೇ ಬಾರಿ.

ವೀರಶೈವರ ಆಧ್ಯಾತ್ಮಿಕ ಗ್ರಂಥವಾದ ಶ್ರೀ ಸಿದ್ಧಾಂತ ಶಿಖಾಮಣಿಯ ಮಲಯಾಳಂ ಅನುವಾದವನ್ನು ಬಿಡುಗಡೆ ಮಾಡಲು ಜಗದ್ಗುರುಗಳು ಮೊದಲ ಬಾರಿಗೆ 2014ರ ಡಿಸೆಂಬರ್ 28ರಂದು ಶ್ರೀಶೈಲ ಪೀಠ ಮತ್ತು ಉಜ್ಜೈನಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಕೇರಳಕ್ಕೆ ಬಂದಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಕೇರಳ ಘಟಕ ನೇತೃತ್ವದಲ್ಲಿ ಕೊಟ್ಟಾಯಂ ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀರಶೈವರು ಭಾಗವಹಿಸಿದ್ದರು.

ಎರ್ನಾಕುಲಂ ಜಿಲ್ಲೆಯ ಆಲುವಾ ಶಿವರಾತ್ರಿ ಮಣಪ್ಪುರಂನಲ್ಲಿ ಕಾಶಿ ಜಗದ್ಗುರುಗಳ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಮಂದಿ ಭಕ್ತರು 2016ರ ಏಪ್ರಿಲ್ 24ರಂದು ಶಿವಲಿಂಗ ದೀಕ್ಷೆ ಪಡೆದರು.

ಸಮಾರಂಭದಲ್ಲಿ ಸುಮಾರು 3 ಸಾವಿರ ಮಂದಿ ವೀರಶೈವರು ಪಾಲ್ಗೊಂಡಿದ್ದರು. ಕರ್ನಾಟಕದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಶಿವಗಂಗಾ ಮೇಲಣಗಾವಿ ಮಠದ ಶ್ರೀ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡ ಅಮರೇಶ್ವರ ಮಠದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಹಾಗೂ ಹುಕ್ಕೇರಿ ಗುರುಶಾಂತೇಶ್ವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡಿದ್ದರು.

ಕೇರಳ ರಾಜ್ಯದಲ್ಲಿ ವೀರಶೈವ ಧರ್ಮ ಬೆಳವಣಿಗೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕವಾಗಿ ಭದ್ರ ಪರಂಪರೆಯ ಹಾಕುವ ನಿಟ್ಟಿನಲ್ಲಿ ಕಾಶಿ ಜಗದ್ಗುರುಗಳ ಪಾತ್ರ ಮಹತ್ವದಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!