Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಗರಿಷ್ಠ ಪರಿಹಾರ ನೀಡಲು ಸೂಚನೆ

ಗರಿಷ್ಠ ಪರಿಹಾರ ನೀಡಲು ಸೂಚನೆ

ಉಡುಪಿ: ಪಾದೂರಿನಲ್ಲಿ ಎರಡನೇ ಹಂತದ ಐ.ಎಸ್.ಪಿ.ಆರ್.ಎಲ್. ಕಚ್ಛಾ ತೈಲ ಸಂಗ್ರಹಾಗಾರ (ಕ್ರೂಡ್ ಆಯಿಲ್ ಸ್ಟೋರೇಜ್)ದ 2ನೇ ಘಟಕದ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ 210 ಎಕ್ರೆ ಭೂ ಸ್ವಾಧೀನದ ಅಗತ್ಯವಿದ್ದು, ಯೋಜನೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಪರಿಷ್ಕೃತ ಭೂಸ್ವಾಧೀನ ನಿಯಮದಂತೆ ಗರಿಷ್ಠ ಪರಿಹಾರ ನೀಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಸ್ತರಣೆ ಯೋಜನೆಯಿಂದ ಸಂತ್ರಸ್ತರಾಗುವ ಸಾರ್ವಜನಿಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಐ.ಎಸ್.ಪಿ.ಆರ್.ಎಲ್. ಯೋಜನೆ ದೇಶದ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಅದರಿಂದ 410 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹ ಸಾಧ್ಯವಾಗಲಿದೆ. ಯೋಜನೆ ವಿಸ್ತರಣೆಯಿಂದ ಜಾಗ ಕಳೆದುಕೊಳ್ಳುವವರಿಗೆ ಗರಿಷ್ಠ ಪರಿಹಾರ ನೀಡಿ, ಸೂಕ್ತ ಪುನರ್ವಸತಿ ಸೌಲಭ್ಯ ಕಲ್ಪಿಸುವಂತೆ ಕೆ.ಐ.ಎ.ಡಿ.ಬಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಸ್ತರಣೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದಂತೆ ಹಾಗೂ ಸ್ಥಳದಲ್ಲಿರುವ 800 ವರ್ಷದಷ್ಟು ಪುರಾತನವಾದ ಜೈನ ಬಸದಿ ಹಾಗೂ ಸಮೀಪದ ಮನೆಗಳಿಗೆ ಹಾನಿಯಾಗದಂತೆ ರೀ ಸರ್ವೇ ನಡೆಸಿ, ಪರಿಷ್ಕೃತ ನಕ್ಷೆ ಸಿದ್ಧಪಡಿಸಲು ಸೂಚಿಸಿದರು.

ಪಾದೂರು ವ್ಯಾಪ್ತಿಯ ಭೂ ಪ್ರದೇಶದ ಎಸ್.ಆರ್. ಬೆಲೆ ಹೆಚ್ಚಿಸಿ, ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಗರಿಷ್ಠ ಬೆಲೆ ದೊರೆಯುವಂತೆ ಮಾಡಿ, ಸಂತ್ರಸ್ತರಿಗೆ ಸೂಕ್ತ ಉದ್ಯೋಗ ನೀಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

2ನೇ ಘಟಕದ ವಿಸ್ತರಣೆ ಕುರಿತಂತೆ ಪ್ರಾಥಮಿಕ ಸರ್ವೇ ನಡೆಸಲಾಗಿದೆ. 227 ಮಂದಿ ಸಂತ್ರಸ್ತರಿಗೆ ನೋಟಿಸ್ ನೀಡಬೇಕಿದ್ದು, ಈಗಾಗಲೇ 30 ಮಂದಿಗೆ ನೀಡಲಾಗಿದ್ದು, 3 ಮಂದಿ ನಿರಾಕರಿಸಿದ್ದಾರೆ. ಉಳಿದವರ ವಿಳಾಸ ಪತ್ತೆಮಾಡಿ ನೋಟಿಸ್ ನೀಡುವ ಕಾರ್ಯ ಪ್ರಗತಿಯಲ್ಲಿದೆ. ನೋಟಿಸ್ ಪಡೆದ 30 ದಿನಗಳ ವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಕೆ.ಐ.ಯು.ಡಿ.ಬಿ. ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಓ ಡಾ. ನವೀನ ಭಟ್, ಎಎಸ್ಪಿ ಕುಮಾರಚಂದ್ರ, ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ, ಕಾಪು ತಾ.ಪಂ. ಅಧ್ಯಕ್ಷೆ ಶಶಿಪ್ರಭಾ, ಐ.ಎಸ್.ಪಿ.ಆರ್.ಎಲ್. ಅಧಿಕಾರಿ ಅಜಯ್, ರಾಜಶೇಖರ್ ಹಾಗೂ ಯೋಜನೆಯಿಂದ ಸಂತ್ರಸ್ತರಾಗುವ ಸಾರ್ವಜನಿಕರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!