Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಭಗವದ್ಗೀತೆ ಸನ್ಮತಿ ನೀಡುವ ಗ್ರಂಥ: ಪುತ್ತಿಗೆ ಶ್ರೀ

ಭಗವದ್ಗೀತೆ ಸನ್ಮತಿ ನೀಡುವ ಗ್ರಂಥ: ಪುತ್ತಿಗೆ ಶ್ರೀ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ಭಗವದ್ಗೀತೆ ಸನ್ಮತಿ ನೀಡುವ ಗ್ರಂಥ: ಪುತ್ತಿಗೆ ಶ್ರೀ
ಉಡುಪಿ: ಭಗವದ್ಗೀತೆ ಮತೀಯ ಗ್ರಂಥವಲ್ಲ, ಸನ್ಮತಿ ನೀಡುವ ಗ್ರಂಥ. ಹಾಗಾಗಿ ಗೀತೆಯ ಬಗ್ಗೆ ಎಲ್ಲರೂ ಅರಿತಿರಬೇಕು ಎಂದು ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

2024ರ ತಮ್ಮ ಪರ್ಯಾಯಾವಧಿಯಲ್ಲಿ ಸಂಕಲ್ಪಿಸಿದ ಕೋಟಿ ಗೀತಾ ಲೇಖನ ಪ್ರಚಾರಾರ್ಥ ಪಂಚ (ಐದು) ರಥಗಳಿಗೆ ಸೋಮವಾರ ಚಾಲನೆ ನೀಡಿದರು.

ಶ್ರೀಕೃಷ್ಣ ಯಾವುದೇ ವ್ಯಕ್ತಿಯ ಪರ ಅಲ್ಲ. ಆತ ತತ್ವದ ಪರ ಮತ್ತು ಸಜ್ಜನರ ಪಕ್ಷಪಾತಿ. ಹಾಗಾಗಿ ಗೀತೆ ಮತೀಯ ಗ್ರಂಥವಲ್ಲ, ಸನ್ಮತಿ ನೀಡುವ ಗ್ರಂಥ ಎಂದು ಪ್ರತಿಪಾದಿಸಿದರು.

ಗೀತೆಯಿಂದ ಪರಿಹಾರ
ಗೀತೆಯಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಾಧ್ಯ. ಅಹಂಕಾರ ಮತ್ತು ಮಮಕಾರದಿಂದ ಸಮಸ್ಯೆಗಳುಂಟಾಗುತ್ತದೆ. ಕೌಟುಂಬಿಕ ಸಮಸ್ಯೆಯಿಂದ ತೊಡಗಿ ಅಂತಾರಾಷ್ಟ್ರೀಯ ಸಮಸ್ಯೆ, ಯುದ್ಧ ಇತ್ಯಾದಿಗಳಿಗೆ ಅಹಂಕಾರ, ಮಮಕಾರಗಳೇ ಕಾರಣ. ಎಲ್ಲವೂ ಭಗವಂತನ ಅಧೀನ ಎಂದು ತಿಳಿದರೆ ಮನುಷ್ಯನಿಗೆ ಅಹಂಕಾರ ಬರಲು ಸಾಧ್ಯವಿಲ್ಲ. ಬಾಹ್ಯ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ.

ಮನೆಯಿಂದಲೇ ಸಮಸ್ಯೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತೀ ಮನೆಯಲ್ಲಿ ಗೀತಾ ಲೇಖನ ಸಾಗಬೇಕು. ಪ್ರತಿಯೊಬ್ಬರೂ ಭಗವದ್ಗೀತೆಯ ಪರಿಜ್ಞಾನ ಹೊಂದಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ಮುಖಂಡರಾದ ಪ್ರಮೋದ್ ಮಧ್ವರಾಜ್, ಮಟ್ಟಾರು ರತ್ನಾಕರ ಹೆಗ್ಡೆ, ಯಶಪಾಲ್ ಸುವರ್ಣ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಮೊದಲಾದವರಿದ್ದರು. ಬಿ. ಗೋಪಾಲಾಚಾರ್ ಸ್ವಾಗತಿಸಿ, ನಿರೂಪಿಸಿದರು. ಡಾ| ಸುಗುಣೇಂದ್ರ ರಾವ್ ರಥ ಯಾತ್ರೆ ಬಗ್ಗೆ ಮಾಹಿತಿ ನೀಡಿದರು.

ಪಂಚ ರಥಗಳು
ರಾಜ್ಯವ್ಯಾಪಿ ಗೀತಾ ಲೇಖನ ಪ್ರಚಾರ ಕಾರ್ಯ ಕೈಗೊಳ್ಳಲು ಅನಿರುದ್ಧ, ಸಂಕರ್ಷಣ, ಪ್ರದ್ಯಮ್ನ, ವಾಸುದೇವ ಮತ್ತು ನಾರಾಯಣ ಎಂಬ ಐದು ರಥಗಳನ್ನು ತಲಾ 3 ಮಂದಿ ಮುಖ್ಯಸ್ಥರೊಂದಿಗೆ ಚಾಲನೆ ನೀಡಲಾಯಿತು.

ಈ ತಂಡಗಳಿಗೆ ಅನುಕ್ರಮವಾಗಿ ಡಾ| ಬಿ. ಗೋಪಾಲಾಚಾರ್, ಶ್ರೀರಮಣ ಆಚಾರ್ಯ, ಶ್ರೀಚಂದನ ಕಾರಂತ, ಮಹಿತೋಷ ಆಚಾರ್ಯ ಮತ್ತು ಕೆ. ರಮೇಶ್ ಭಟ್ ಅವರಿಗೆ ನೇತೃತ್ವ ನೀಡಲಾಗಿ, ಎಲ್ಲ ಊರಿನ ಭಕ್ತರನ್ನು ಸಂಪರ್ಕಿಸಿ, ಭಕ್ತರನ್ನು ನೋಂದಣಿ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಲಾಯಿತು.

ಪ್ರತಿಯೊಬ್ಬರಿಗೂ ಕಾರ್ಯಕ್ರಮ ವಿವರ ಇತ್ಯಾದಿ ಹೊಂದಿರುವ ಗುರುತಿನಚೀಟಿ ನೀಡಲಾಯಿತು.

ಪರ್ಯಾಯ ಪಂಚ ಯೋಜನೆ
ಮುಂದಿನ ಪುತ್ತಿಗೆ ಮಠದ ಪರ್ಯಾಯಾವಧಿಯಲ್ಲಿ ಪ್ರಧಾನ ಪಂಚ ಯೋಜನೆಗಳನ್ನು ಪುತ್ತಿಗೆ ಶ್ರೀಗಳು ಪ್ರಕಟಿಸಿದರು.
ಕೋಟಿ ಜನರಿಂದ ಭಗವದ್ಗೀತೆ ಬರೆಸುವುದು
ಅಂತಾರಾಷ್ಟ್ರೀಯ ಭಗವದ್ಗೀತೆ ಸಮ್ಮೇಳನ
ಅಖಂಡ ಗೀತಾ ಪಾರಾಯಣ, ಗೀತಾ ಯಾಗ
ಶ್ರೀಕೃಷ್ಣನಿಗೆ ಗೀತೋಪದೇಶದ ಚಿನ್ನದ ರಥ ಸಮರ್ಪಣೆ
ಕಲ್ಸಂಕದಲ್ಲಿ ಕೃಷ್ಣ ಮಠಕ್ಕೆ ಬರುವಲ್ಲಿ ಭವ್ಯ ಸ್ವಾಗತ ಗೋಪುರ ಹಾಗೂ ಮಧ್ವಾಚಾರ್ಯ ಪ್ರತಿಮೆ ಸ್ಥಾಪನೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!