Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ ಇನ್ನಿಲ್ಲ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ ಇನ್ನಿಲ್ಲ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ ಇನ್ನಿಲ್ಲ

(ಸುದ್ದಿಕಿರಣ ವರದಿ)
ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗುರುವ ಕೊರಗ ಭಾನುವಾರ ವಯೋಸಹಜವಾಗಿ ಅಸುನೀಗಿದ್ದಾರೆ. ಅವರಿಗೆ 105 ವರ್ಷ ವಯಸ್ಸಾಗಿತ್ತು.

ತುಳುನಾಡಿನ ಸಾಂಪ್ರದಾಯಿಕ ಡೋಲು ವಾದನದಲ್ಲಿ ಅವರು ಅಗ್ರಮಾನ್ಯರಾಗಿದ್ದರು.

ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಗುರುವ ಕೊರಗ, ಹಿರಿಯಡ್ಕದ ಗುಡ್ಡೆಯಂಗಡಿ ಸಮೀಪದ ಬಲ್ನೋಡಿ ನಿವಾಸಿ. ತನ್ನ 12ನೇ ವಯಸ್ಸಿನಿಂದಲೇ ಡೋಲು ನುಡಿಸುವುದು ಮತ್ತು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದರು.

ಶತಾಯುಷಿಯಾದರೂ ಅವರು ಹಿರಿಯಡ್ಕ, ಕಣಜಾರು ಜಾತ್ರೆ, ಗರಡಿ ಉತ್ಸವ, ಕೋಲ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುವ ಕಂಬಳಗಳಲ್ಲಿ ಡೋಲು ವಾದನ ನಡೆಸುತ್ತಿದ್ದರು.

ಅವರ ಸಂಸ್ಕೃತಿಪ್ರಿಯತೆ ಹಾಗೂ ಸಂಪ್ರದಾಯ ಉಳಿಸಿಕೊಂಡ ಸಾಧನೆಗಾಗಿ ಅವರಿಗೆ 2017ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ, 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

ಸಚಿವ ಸುನಿಲ್ ಸಂತಾಪ
ನಾಡಿನ ಹಿರಿಯ ಜನಪದ ಕಲಾವಿದ ಗುರುವ ಕೊರಗ ನಿಧನದಿಂದ ನಾಡಿನ ಸಾಂಸ್ಕೃತಿಕ ಮತ್ತು ಜನಪದ ಕ್ಷೇತ್ರಕ್ಕೆ ಬಹಳ ದೊಡ್ಡ ನಷ್ಟವಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಸಮಾಜದ ಕಟ್ಟಕಡೆಯ ಸಮುದಾಯದಿಂದ ಬಂದ ಅವರು ತಮ್ಮ ಪರಂಪರಾಗತ ಡೋಲು ವಾದನ ಕಲೆಯನ್ನು ಮೈಗೂಡಿಸಿಕೊಂಡು ತಮ್ಮ ಆಯಸ್ಸಿನ ಕೊನೆಯ ವರೆಗೂ ಅದನ್ನು ಮುಂದುವರಿಸಿಕೊಂಡು ಬಂದು, ನೂರಾರು ಮಂದಿಗೆ ಆ ವಿದ್ಯೆ ಧಾರೆಯೆರೆದು, ಪೋಷಿಸಿದ ಅವರ ಕಾಳಜಿ ಸ್ಮರಣೀಯವಾದುದು.

ಯಾವುದೇ ದುರಭ್ಯಾಸಗಳಿಲ್ಲದೇ ಶತಮಾನ ಪೂರೈಸಿದ ಅವರ ಬದುಕಿನ ರೀತಿ ನೀತಿ ಕಲಾವಿದರೆಲ್ಲರಿಗೂ ಆದರ್ಶಪ್ರಾಯ ಎಂದು ಸುನಿಲ್ ಬಣ್ಣಿಸಿದ್ದಾರೆ.

ಗುರುವ ಕೊರಗ ನಿಧನಕ್ಕೆ ಶಾಸಕ ರಘುಪತಿ ಭಟ್, ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಸಂತಾಪ ಸೂಚಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!