Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಚಂಡಮಾರುತದಿಂದ 68 ಕೋ. ಹಾನಿ

ಚಂಡಮಾರುತದಿಂದ 68 ಕೋ. ಹಾನಿ

ಉಡುಪಿ: ಈಚೆಗೆ ಸಂಭವಿಸಿದ ತೌಕ್ತೆ ಚಂಡಮಾರುತದಿಂದಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ 68 ಕೋ. ರೂ. ಹಾನಿ ಸಂಭವಿಸಿದೆ ಎಂದು ಕಂದಾಯ ಸಚಿವ ಆರ್. ಆಶೋಕ್ ತಿಳಿಸಿದರು.

ಜಿಲ್ಲೆಯ ಹಾನಿಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ ಅವರು, ಜಿ.ಪಂ. ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಚಂಡಮಾರುತದಿಂದಾಗಿ 75.04 ಮಿ. ಮೀ. ಮಳೆಯಾಗಿದೆ. ಸಂತ್ರಸ್ತರ ರಕ್ಷಣೆಗಾಗಿ 14 ಕೇಂದ್ರಗಳನ್ನು ತೆರೆಯಲಾಗಿದ್ದು, ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗಿತ್ತು. ಎಸ್.ಡಿ.ಆರ್.ಎಫ್ ತಂಡದವರು ಕಾರ್ಯನಿರ್ವಹಿಸಿದ್ದರು ಎಂದರು.

ಗಾಳಿ ಮಳೆಯಿಂದಾಗಿ 100 ತೆಂಗಿನಮರ, 32.5 ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ನಷ್ಟವಾಗಿದೆ. ಜೊತೆಗೆ ಹೆದ್ದಾರಿ ಹಾಗೂ ಜಿಲ್ಲಾ ಮಟ್ಟದ ರಸ್ತೆಗಳು ಹಾನಿಗೊಂಡಿವೆ. ಮೆಸ್ಕಾಂ ಇಲಾಖೆಗೆ ಸಾಕಷ್ಟು ನಷ್ಟವುಂಟಾಗಿದೆ. ಮೀನುಗಾರಿಕೆ ದೋಣಿಗಳೂ ಹಾನಿಯಾಗಿವೆ ಎಂದು ಸಚಿವ ಅಶೋಕ್ ಮಾಹಿತಿ ನೀಡಿದರು.

ಕೂಡಲೇ ನಷ್ಟ ಪ್ರಮಾಣ ಪರಿಶೀಲನೆ ನಡೆಸಿ, ಮುಂದಿನ 2 ದಿನದೊಳಗೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ ಅಶೋಕ್ ರಸ್ತೆ, ಕರಾವಳಿ ತಟ, ಸಮುದ್ರ ತಡಗೋಡೆ ದುರಸ್ತಿ ಇತ್ಯಾದಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದ ಅವರು, ಕೋವಿಡ್ ನಿಂದಾಗಿ ಸ್ಥಗಿತಗೊಳಿಸಲಾಗಿದ್ದ ಕಲ್ಲು ಗಣಿಕಾರಿಕೆಯನ್ನು ಮತ್ತೆ ಪುನರಾರಂಭಿಸಲು ಗಣಿ ಇಲಾಖೆ ಸಚಿವ ಮುರುಗೇಶ ನಿರಾನಿ ಸೂಚನೆ ಮೇರೆಗೆ ತೆರವುಗೊಳಿಸಲಾಗಿದೆ. ಸಮುದ್ರ ಕೊರೆತ ತಡೆಗೆ ಕಲ್ಲು ಹಾಕುವ ಕಾರ್ಯವನ್ನು ತಕ್ಷಣ ಆರಂಭಿಸಲು ಎಲ್ಲ ಶಾಸಕರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಮಳೆಯಿಂದಾಗಿ ಸಾವನ್ನಪ್ಪಿದವರಿಗೆ 10 ಲಕ್ಷ ಹಾಗೂ ಮನೆ ಸಂಪೂರ್ಣ ಕಳೆದುಕೊಂಡವರಿಗೆ 10 ಲಕ್ಷ ಹಾಗೂ ಭಾಗಶಃ ಹಾನಿಯಾದವರಿಗೆ 1 ಲಕ್ಷ ಪರಿಹಾರ ನೀಡಲಾಗುವುದು ಎಂದರು.

ಲಾಕ್ ಡೌನ್ ವಿಸ್ತರಣೆ ಬಯಕೆ
ಕೊರೊನಾ ನಿಯಂತ್ರಣ ಹಿನ್ನೆಯಲ್ಲಿ ಈ ತಿಂಗಳ 24ರ ವರೆಗೆ ಜಾರಿಗೊಳಿಸಲಾಗಿರುವ ಲಾಕ್ ಡೌನ್ ವಿಸ್ತರಿಸಿದಲ್ಲಿ ಉತ್ತಮ. ಈ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದ ಸಚಿವ ಆರ್. ಅಶೋಕ್, ಲಾಕ್ ಡೌನ್ ಜಾರಿಗೊಳಿಸಿದ್ದ ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದನ್ನು ಗಮನಿಸಬೇಕು ಎಂದರು.

ಬೆಂಗಳೂರು ನಿವಾಸಿಗಳು ಬಹುತೇಕ ಹಳ್ಳಿಗಳಿಗೆ ವಲಸೆ ಬಂದಿರುವ ಹಿನ್ನೆಲೆಯಲ್ಲಿ ಈಚಿನ ದಿನಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಪ್ರಮಾಣ ಹೆಚ್ಚಾಗಿದೆ. ಅದರ ನಿಯಂತ್ರಣಕ್ಕಾಗಿ ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಗೊಳಿಸಿದಂತೆ ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ಸೇವೆಯನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.

ಪ್ರತೀ ವಾರಕ್ಕೆ ಮೂರು ಬಾರಿ ವೈದ್ಯರು ಭೇಟಿ ನೀಡಿ ತಪಾಸಣೆ, ಚಿಕಿತ್ಸೆ ಇತ್ಯಾದಿ ನಡೆಸಬೇಕು. ಅವರಿಗೆ ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು ವೈದ್ಯಕೀಯ ಪರಿಕರ ನೀಡಲಾಗುವುದು.

ಈಗಾಗಲೇ ವೈದ್ಯಕೀಯ ಸಚಿವ ಡಾ. ಸುಧಾಕರ್ ಮನವಿ ಮೇರೆಗೆ 1,800ಕ್ಕೂ ಹೆಚ್ಚು ವೈದ್ಯರು, ದಾದಿಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಶೋಕ್ ತಿಳಿಸಿದರು.

ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್, ಲಾಲಾಜಿ ಮೆಂಡನ್ ಮತ್ತು ಬಿ. ಎಂ. ಸುಕುಮಾರ ಶೆಟ್ಟಿ, ಜಿ. ಪಂ. ಸಿಇಓ ಡಾ. ನವೀನ ಭಟ್, ಎಸ್ಪಿ ವಿಷ್ಣುವರ್ಧನ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!