Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಜನಸಂಖ್ಯಾ ನಿಯಂತ್ರಣ ಅಗತ್ಯ

ಜನಸಂಖ್ಯಾ ನಿಯಂತ್ರಣ ಅಗತ್ಯ

ಉಡುಪಿ: ಜನಸಂಖ್ಯೆ ಏರಿಕೆ ಜೊತೆ ಜೊತೆಗೆ ಹಲವಾರು ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಬಡತನ, ಆರ್ಥಿಕತೆ ಹಾಗೂ ಶಿಕ್ಷಣಕ್ಕೆ ಎದುರಾಗುವ ಸಂಕಷ್ಟಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಪ್ರತಿಪಾದಿಸಿದರು.

ಶುಕ್ರವಾರ ಅಂಬಲಪಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಗತಿ ಸೌಧದಲ್ಲಿ ಜಿ. ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಉಡುಪಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಮಲೇರಿಯಾ ಮತ್ತು ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಘುಪತಿ ಭಟ್, ಜನಸಂಖ್ಯೆ ಒಂದು ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಒಂದು ಬೇಕು, ಎರಡು ಸಾಕು ಎಂಬ ಘೋಷಣೆ ಪಾಲಿಸಿದರೆ ಜನಸಂಖ್ಯೆ ಏರಿಕೆ ಕಡಿಮೆಗೊಳಿಸಬಹುದು ಎಂದರು.

ಎಚ್ಚರ ಅಗತ್ಯ
ಮಳೆಗಾಲ ಸಂದರ್ಭದಲ್ಲಿ ಮನೆ ಪರಿಸರದಲ್ಲಿ ಕಲುಷಿತ ನೀರು ಶೇಖರಗೊಂಡು ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾದಂಥ ಸಾಂಕ್ರಾಮಿಕ ರೋಗಗಳು ಹರಡದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಶಾಸಕ ಭಟ್ ಹೇಳಿದರು.

ಕೋವಿಡ್ ಸಂಕಷ್ಟದ ನಡುವೆ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ನಗರ ಪ್ರದೇಶದಲ್ಲಿ ನೀರು ನಿಲ್ಲುವ ಜಾಗದಲ್ಲಿ ಕ್ರಿಮಿನಾಶಕ ಸಿಂಪಡಿಸಬೇಕು. ಗ್ರಾಮೀಣ ಪ್ರದೇಶದಲ್ಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಹಡಿಲು ಭೂಮಿ ಕೃಷಿ ಯೋಜನೆ ಕೈಗೊಂಡಾಗ, ಗದ್ದೆಗಳಲ್ಲಿ ಹೆಚ್ಚು ನೀರು ಶೇಖರಣೆಯಾಗುವ ಜಾಗಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಗಿದೆ. ಡೆಂಗ್ಯೂ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳಿಗೆ ಇದರಿಂದ ಕಡಿವಾಣ ಹಾಕಲು ಸಾಧ್ಯ ಎಂದರು.

ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಜನಸಂಖ್ಯೆ ದಿನಾಚರಣೆ ಹಾಗೂ ಮಲೇರಿಯಾ ಮತ್ತು ಡೆಂಗ್ಯೂ ಮಾಸಾಚರಣೆ ಕರಪತ್ರ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ ರಾವ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!