Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಜಾನಪದ ಸಾಹಿತ್ಯ ಕಲೆಗಳ ದಾಖಲೀಕರಣ ಇಂದಿನ ಅಗತ್ಯ

ಜಾನಪದ ಸಾಹಿತ್ಯ ಕಲೆಗಳ ದಾಖಲೀಕರಣ ಇಂದಿನ ಅಗತ್ಯ

ಕಾಪು: ಪ್ರಾಚೀನ ಜಾನಪದ ಕಲೆ, ಆಚರಣೆ, ಜನಪದರ ನಂಬಿಕೆಗಳು ಹಳ್ಳಿ ಜನರ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ. ಅನೇಕ ಬಗೆಯ ಜಾನಪದ ಮೌಖಿಕ ಸಾಹಿತ್ಯ ಕಲೆಗಳು ನಶಿಸಿಹೋಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಜನಪದ ಸಾಹಿತ್ಯ ಕಲೆಗಳ ದಾಖಲೀಕರಣ ಅಗತ್ಯವಾಗಿ ಆಗಬೇಕಿದೆ ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ತಿಳಿಸಿದ್ದಾರೆ.
ಕಟಪಾಡಿ ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಕಾಪು ತಾಲೂಕು ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ನಡೆದ ತುಳು ಜಾನಪದ ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರ ಮೂಡಬೆಟ್ಟು ಕಟಪಾಡಿ ಅವರಿಗೆ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಟಪಾಡಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘ ಸಂಚಾಲಕ ಕೆ. ಸತ್ಯೇಂದ್ರ ಪೈ, ಕನ್ನಡ ಜಾನಪದ ಪರಿಷತ್ ಕಾಪು ತಾಲೂಕಿನಲ್ಲಿರುವ ಜಾನಪದ ಕಲಾವಿದರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮನೆ ಮನೆಯಲ್ಲಿ ಜಾನಪದ ಕಾರ್ಯಕ್ರಮಗಳಂಥ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ನವ ಪೀಳಿಗೆಗೆ ಜಾನಪದ ಲೋಕ ಪರಿಚಯಿಸಬೇಕಿದೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಸಖಾರಾಮ್ ಹಾವಂಜೆ, ಜನಪದ ಕ್ಷೇತ್ರಕ್ಕೆ ಒತ್ತುನೀಡುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಕಾಪು ಘಟಕದ ವತಿಯಿಂದ ಜಾನಪದ ಉತ್ಸವ ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕನಕ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಕನಕದಾಸರ ಗೀತ ಗಾಯನ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಸಖಾರಾಮ್ ಹಾವಂಜೆ, ನಾರಾಯಣಮೂರ್ತಿ ಲಕ್ಷ್ಮೀನಗರ, ಶಂಕರ್ ಅಂಬಲಪಾಡಿ, ವೈಷ್ಣವಿ ಉಡುಪಿ, ನಂದಿನಿ ಅಲೆವೂರು, ಪ್ರಕಾಶ ಸುವರ್ಣ ಕಟಪಾಡಿ ಸಂಕೀರ್ತನೆ ಹಾಡಿದರು. ಬಾಲಪ್ರತಿಭೆ ಯಶಸ್ ಪಿ. ಸುವರ್ಣ ಕೊಳಲು ವಾದನದ ಮೂಲಕ ರಂಜಿಸಿದರು. ಸಂಧಿ ಪಾಡ್ದನ ಕಲಾವಿದೆ ಗೋಪಿ ಪಾಣಾರ ತುಳು ಪಾಡ್ದನ ಹಾಡಿದರು.
ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪರಿಷತ್ ಮಾಧ್ಯಮ ಕಾರ್ಯದರ್ಶಿ ರಾಕೇಶ್ ಕುಂಜೂರು ಅವರನ್ನು ಸನ್ಮಾನಿಸಲಾಯಿತು. ಕಾಪು ತಾಲೂಕು ಜಾನಪದ ಪರಿಷತ್ ಕೋಶಾಧಿಕಾರಿ ಕೆ.ನಾಗೇಶ್ ಕಾಮತ್, ಜೊತೆ ಕಾರ್ಯದರ್ಶಿ ಪವಿತ್ರಾ ಆರ್. ಶೆಟ್ಟಿ ಇದ್ದರು.
ಕಾಪು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಭುವನೇಶ್ ಪ್ರಭು ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!