Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಹಾಡುಹಗಲೇ ದರೋಡೆಗೆ ಯತ್ನ: ಜಾಗೃತಿಗಾಗಿ ಪೋಲಿಸ್ ಇಲಾಖೆ ಅಣಕು ಪ್ರದರ್ಶನ

ಹಾಡುಹಗಲೇ ದರೋಡೆಗೆ ಯತ್ನ: ಜಾಗೃತಿಗಾಗಿ ಪೋಲಿಸ್ ಇಲಾಖೆ ಅಣಕು ಪ್ರದರ್ಶನ

ಹಾಡುಹಗಲೇ ದರೋಡೆಗೆ ಯತ್ನ: ಜಾಗೃತಿಗಾಗಿ ಪೋಲಿಸ್ ಇಲಾಖೆ ಅಣಕು ಪ್ರದರ್ಶನ

(ಸುದ್ದಿಕಿರಣ ವರದಿ)
ಮಂಗಳೂರು: ನಗರ ಪೊಲೀಸ್ ಮತ್ತು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ದರೋಡೆ ಜಾಗೃತಿಗಾಗಿ ಅಣುಕು ಪ್ರದರ್ಶನ ನಡೆಸಲಾಯಿತು.

ಘಟನೆಯ ವೀಡಿಯೊ ವೈರಲ್ ಆಗಿದ್ದು, ನೈಜ ಘಟನೆ ಎಂದೇ ಸಾರ್ವಜನಿಕರು ನಂಬುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಗರದ ಸೈಂಟ್ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡದ ದುಷ್ಕರ್ಮಿಯೊಬ್ಬ ಮಹಿಳೆಯ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದಾಗ ಮಹಿಳೆ ಆತನ ವಿರುದ್ಧ ತಿರುಗಿಬಿದ್ದು, ಆತನಿಗೆ ಹಲ್ಲೆ ಮಾಡುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವ ಘಟನೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಅಣಕು ಕಾರ್ಯಾಚರಣೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಅಣುಕು ಪ್ರದರ್ಶನ ಬೆಳಿಗ್ಗೆ ಸುಮಾರು 11 ಗಂಟೆಗೆ ನಡೆದಿದ್ದು, ಸ್ಥಳೀಯರೊಬ್ಬರು ಇಖಖಖ ಸಂಖ್ಯೆ 112ಕ್ಕೆ 11-03 ಗಂಟೆಗೆ ಕರೆ ಮಾಡಿದ್ದು, ಇಖಖಖ 112 ರಕ್ಷಣಾ ವಾಹನ ಕೂಡಲೇ ತೆರಳಿ, 12-08 ಗಂಟೆಗೆ ಘಟನಾ ಸ್ಥಳಕ್ಕೆ ಆಗಮಿಸುತ್ತದೆ. ಅದೇ ವೇಳೆಗೆ ಕದ್ರಿ ಪೊಲೀಸ್ ಠಾಣೆಯ ನಿರೀಕ್ಷಕರು ಮತ್ತು ಸಿಬ್ಬಂದಿಗಳು 11-18 ಗಂಟೆಗೆ ಸ್ಥಳಕ್ಕೆ ಭೇಟಿ ಕೊಡುತ್ತಾರೆ. ಮೇಲಧಿಕಾರಿಗಳೂ ಆಗಮಿಸುತ್ತಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಕಂಟ್ರೋಲ್ ರೂಮಿನವರು ನಗರಾದ್ಯಂತ ಚೆಕ್ ಪೋಸ್ಟ್ ಗಳನ್ನು ಅಲರ್ಟ್ ಮಾಡಿದ್ದಲ್ಲದೇ ಸಂಶಯಾಸ್ಪದ ವಾಹನವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ.

ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ಹಾಗೂ ಆಗ್ನೆಸ್ ಕಾಲೇಜು ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಹಾಗೂ ಪುರುಷ ಪಾದಚಾರಿಗಳು ಅಣುಕು ದುಷ್ಕರ್ಮಿಗಳು ಮತ್ತು ಅವರಿದ್ದ ವಾಹನವನ್ನು ತಡೆಯುವ ಹಾಗೂ ಪತ್ತೆಹಚ್ಚುವಲ್ಲಿ ಮತ್ತು ಕಾರನ್ನು ಹಿಂಬಾಲಿಸುವ ಪ್ರಯತ್ನ ಮಾಡಿರುವುದು ಅಭಿನಂದನಾರ್ಹ ಎಂದವರು ತಿಳಿಸಿದ್ದಾರೆ.

ವಾಹನವನ್ನು ಸಾರ್ವಜನಿಕರು ಮೋಟಾರು ಸೈಕಲ್ ಹಾಗೂ 1 ಕಾರಿನಲ್ಲಿ 2 ಹಿಂಬಾಲಿಸಿಕೊಂಡು ಬಂದು ದುಷ್ಕರ್ಮಿಯ ಚಹರೆ ಹಾಗೂ ವಾಹನದ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದು, ಮುಂದೆ ಸಿಗ್ನಲ್ ಬಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ದುಷ್ಕರ್ಮಿಗಳ ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಳ್ಳುವಲ್ಲಿ ಸಹಕರಿಸಿರುತ್ತಾರೆ.

ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಲಾಗಿ ಸಾರ್ವಜನಿರೊಬ್ಬರು ತಮ್ಮ ಕಾರನ್ನು ದುಷ್ಕರ್ಮಿಗಳ ಕಾರಿಗೆ ಅಡ್ಡಲಾಗಿ ನಿಲ್ಲಿಸಲು ಪ್ರಯತ್ನಿಸಿದ್ದೂ ಶ್ಲಾಘನೀಯ. ಅವರನ್ನು ಪತ್ತೆಹಚ್ಚಿ ಅವರಿಗೆ ಅಭಿನಂದಿಸಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಅಣುಕು ಕಾರ್ಯಾಚರಣೆ ಯಶಸ್ವಿಯಾಗಿದೆ.

ಶೋಭಲತಾ ಕಟೀಲ್ ಮಾಲಕತ್ವದ ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ಅಣುಕು ಕಾರ್ಯಾಚರಣೆಗೆ ಸಹಕರಿಸಿದೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!