ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಖಚಿತ ಎಂಬ ಸುಳಿವು ನೀಡಿರುವ ಆಡಿಯೊ ತನ್ನ ಧ್ವನಿಯ ಅನುಕರಣೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೊವೊಂದನ್ನು ಯಾರೋ ಕಿಡಿಗೇಡಿಗಳು ವಾಟ್ಸಾಪ್ ನಲ್ಲಿ ಹರಿಯಬಿಟ್ಟಿದ್ದು, ಅದರ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಬೇಕು.
ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದೃಷ್ಟಿಯಲ್ಲಿ ಈ ಆಡಿಯೊವನ್ನು ಹರಿಯಬಿಟ್ಟಿದ್ದು ತನಿಖೆ ನಡೆಸಿದರೆ ಅದರ ನಕಲಿತನ ಸಾಬೀತಾಗಲಿದೆ ಎಂದಿರುವ ನಳಿನ್, ಅದರ ಹಿಂದಿರುವ ಕಿಡಿಗೇಡಿಗಳು ಯಾರೆಂಬ ಕುರಿತು ತನಿಖೆ ನಡೆಸಲು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಜಗದೀಶ ಶೆಟ್ಟರ್ ಮತ್ತು ಈಶ್ವರಪ್ಪ ಟೀಮ್ ಹೊರಗಿಡುವ ಹಾಗೂ ಸಿಎಂ ಬದಲಾವಣೆ ಖಚಿತ ಎಂಬ ಸುಳಿವಿನ ನಳಿನ್ ಕುಮಾರ್ ಧ್ವನಿಯ ಆಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ