ಸುದ್ದಿಕಿರಣ ವರದಿ
ಭಾನುವಾರ, ಜುಲೈ 10
ಪಂಡಿತ್ ಜಿ ಮೌಲ್ಯಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು
ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯ ದೇಶ ಭಕ್ತಿ, ಧ್ಯೇಯ ವಾದ, ಏಕಾತ್ಮ ಮಾನವತಾ ವಾದ ರಾಜಕೀಯ ಮೌಲ್ಯಗಳು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಮತ್ತು ಅವರಿಂದ ಪ್ರೇರಣೆ ಪಡೆದು ದೇಶ, ರಾಷ್ಟ್ರ ಮತ್ತು ಸಮಾಜದ ಬಗ್ಗೆ ಚಿಂತನೆ ಮಾಡುತ್ತಿದ್ದ ರಾಜ್ಯ ಕಂಡ ಶ್ರೇಷ್ಠ ಮುತ್ಸದ್ಧಿ ಡಾ. ವಿ. ಎಸ್. ಆಚಾರ್ಯರಂಥ ಅನೇಕ ಮಹಾಪುರುಷರನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯ ಎಂದು ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಹೇಳಿದರು.
ಪಂಡಿತ್ ದೀನದಯಾಳ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಡಾ. ವಿ. ಎಸ್. ಆಚಾರ್ಯ ಜನ್ಮದಿನ ಪ್ರಯುಕ್ತ ಉಡುಪಿ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಪ್ರತಿಭಾನ್ವಿತ ಈರ್ವರು ವಿದ್ಯಾರ್ಥಿಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಸ್ಮರಣ ಪಾರಿತೋಷಕ ಪ್ರಶಸ್ತಿ, ಪ್ರತೀ ಶಾಲಾ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಡಾ. ವಿ. ಎಸ್. ಆಚಾರ್ಯ ಸ್ಮರಣ ಪಾರಿತೋಷಕ ಪ್ರಶಸ್ತಿ ಹಾಗೂ 2021- 22ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿನಿಗೆ ಗಾಯತ್ರಿ ಸ್ಮರಣ ಪಾರಿತೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.
ದೀನದಯಾಳ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು. ಮೋಹನ ಉಪಾಧ್ಯ ಸ್ವಾಗತಿಸಿದರು, ಟ್ರಸ್ಟ್ನ ಕೆ. ಟಿ. ಪ್ರಸಾದ್, ಡಾ. ರಶ್ಮಿ ರವಿರಾಜ್ ಆಚಾರ್ಯ ಇದ್ದರು. ಟ್ರಸ್ಟಿಗಳಾದ ಹೆರ್ಗ ದಿನಕರ ಶೆಟ್ಟಿ ನಿರೂಪಿಸಿ, ಕೆ. ರಾಘವೇಂದ್ರ ಕಿಣಿ ವಂದಿಸಿದರು.