Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಕೊರಗ ಸಮುದಾಯದವರ ಮನೆಗೆ ನುಗ್ಗಿ ಪೊಲೀಸರಿಂದ ಹಲ್ಲೆ

ಕೊರಗ ಸಮುದಾಯದವರ ಮನೆಗೆ ನುಗ್ಗಿ ಪೊಲೀಸರಿಂದ ಹಲ್ಲೆ

ಕೊರಗ ಸಮುದಾಯದವರ ಮನೆಗೆ ನುಗ್ಗಿ ಪೊಲೀಸರಿಂದ ಹಲ್ಲೆ

ಕುಂದಾಪುರ, ಡಿ. 28 (ಸುದ್ದಿಕಿರಣ ವರದಿ): ಕೊರಗ ಸಮುದಾಯದ ಮದುವೆ ಮನೆಯೊಂದರಲ್ಲಿ ಅಳವಡಿಸಿದ್ದ ಡಿಜೆ ಶಬ್ಧಕ್ಕೆ ಕೆರಳಿದ ಕೋಟ ಠಾಣಾ ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಲಾಠಿ ಚಾರ್ಜ್‌ ನಡೆಸಿದ ಘಟನೆ‌ ಕೋಟ ಸಮೀಪದ ಬಾರಿಕೆರೆ ಎಂಬಲ್ಲಿ ಸೋ‌ಮವಾರ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತವರಲ್ಲೇ ಇಂಥ ಅಮಾನವೀಯ ಘಟನೆ ನಡೆದಿದೆ!
ಕೊರಗ ಸಮುದಾಯದ ಮನೆಯಲ್ಲಿ ಸೋಮವಾರ ನಡೆಯುತ್ತಿದ್ದ ಮೆಹಂದಿ ಮನೆಗೆ ಏಕಾಏಕಿ ನುಗ್ಗಿದ ಪೊಲೀಸರು‌ಮಹಿಳೆಯರು, ಮದುಮಗ ಯಾರನ್ನೂ ಲೆಕ್ಕಿಸದೇ ಏಕಾಏಕಿ ಲಾಠಿ ಬೀಸಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ. ಘಟನೆಯಿಂದ ಮದುಮಗ, ಮಹಿಳೆಯರು ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಹಲ್ಲೆ ಮಾಡಲು ಯಾವುದೇ ಕಾರಣವೂ ಇರಲಿಲ್ಲ ಎಂದು ಸ್ಥಳೀಯ ದಲಿತ ಮುಖಂಡರು ದೂರಿದ್ದಾರೆ.

ಏನಿದು ಘಟನೆ?
ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿರುವ ರಾಜೇಶ್ ಅವರ ಮದುವೆ ಕಾರ್ಯಕ್ರಮವು ಡಿ. 29ರಂದು ಕುಮಟಾದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಡಿ. 27ರಂದು ಮನೆಯಲ್ಲಿ ಮೆಹಂದಿ ಶಾಸ್ತ್ರ ಇಟ್ಟುಕೊಳ್ಳಲಾಗಿತ್ತು. ರಾತ್ರಿ 9.40ರ ಸುಮಾರಿಗೆ ಹೆದ್ದಾರಿ ಗಸ್ತು ಪೊಲೀಸರು ಮನೆಗೆ ಬಂದಿದ್ದು, ಡಿಜೆ ಬಂದ್ ಮಾಡುವಂತೆ ಸೂಚಿಸಿದ್ದರು. ಆ ವೇಳೆ ನೈಟ್ ಕರ್ಫ್ಯೂ ನಾಳೆ ರಾತ್ರಿಯಿಂದ ಜಾರಿ ಆಗುತ್ತದೆ. ನಮ್ಮ ಡಿಜೆಯಿಂದ ಯಾರಿಗೂ ತೊಂದರೆ ಆಗುತ್ತಿಲ್ಲ. ಮನೆಯವರೇ ಹೆಚ್ಚಿನ ಮಂದಿ ಇದ್ದು, ಸ್ವಲ್ಪ ಹೊತ್ತು ಕುಣಿದು ಆ ಬಳಿಕ ಬಂದ್ ಮಾಡುವುದಾಗಿ ಮನೆಯವರು ತಿಳಿಸಿದ್ದರು.
ಬಳಿಕ ಪೊಲೀಸರು ಅಲ್ಲಿಂದ ಹಿಂದೆ ಹೋಗಿದ್ದರು.
ಇದಾದ ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಕೋಟ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಯಾವ ಕಾರಣವೂ ಕೇಳದೆ ಡಿಜೆ, ಲೈಟ್ ಆಫ್‌ ಮಾಡಿ ಮೆಹಂದಿ ಮನೆಯಲ್ಲಿದ್ದ ಹೆಣ್ಣು ಮಕ್ಕಳು, ಮಹಿಳೆಯರು, ಹಿರಿಯರು ಯಾರನ್ನೂ ನೋಡದೆ ಏಕಾಏಕಿ ಲಾಠಿಚಾರ್ಜ್‌ ಮಾಡಿ ರಾಕ್ಷಸರಂತೆ ವರ್ತಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೆಹಂದಿ ಮನೆಯಲ್ಲಿ ಧ್ವನಿವರ್ಧಕ ಬಳಸಿಕೊಂಡು ಕುಣಿಯುತ್ತಿರುವ ಬಗ್ಗೆ ಸ್ಥಳೀಯರೊಬ್ಬರು 112ಗೆ ಕರೆ ಮಾಡಿದ್ದು, ಅದರಂತೆ ಪೊಲೀಸರು ತೆರಳಿ ಬಂದ್ ಮಾಡುವಂತೆ ಸೂಚಿಸಿದ್ದಾರೆ. ಆ ಬಳಿಕವೂ ಬಂದ್ ಮಾಡದೇ ಕುಣಿಯುತ್ತಿದ್ದರು ಎನ್ನುವುದು ಪೊಲೀಸರ ಸಮಜಾಯಿಷಿ.
ಕೋಟತಟ್ಟು ಕೊರಗ ಸಮುದಾಯದವರ ಮನೆಯಲ್ಲಿ ನಡೆದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೊರಗರ ಮನೆಯ ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿ ಬೀಸಿ, ಬೇದರಿಸಿ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿದ ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್‌ ಮತ್ತು ಅವರೊಂದಿಗೆ ಲಾಠಿ ಚಾರ್ಜ್ ಮಾಡಿದ ಸಿಬ್ಬಂದಿಗಳನ್ನು ಈ ಕೂಡಲೇ ಅಮಾನತು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ಈ ಕೂಡಲೇ ಅಮಾನತು ಮಾಡದಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!