Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಮುಖರ್ಜಿ ಪ್ರೇರಣೆ, ಆಚಾರ್ಯ ಮಾರ್ಗದರ್ಶನ ಕಾರ್ಯಕರ್ತರಿಗೆ ಸ್ಪೂರ್ತಿ

ಮುಖರ್ಜಿ ಪ್ರೇರಣೆ, ಆಚಾರ್ಯ ಮಾರ್ಗದರ್ಶನ ಕಾರ್ಯಕರ್ತರಿಗೆ ಸ್ಪೂರ್ತಿ

ಸುದ್ದಿಕಿರಣ ವರದಿ
ಬುಧವಾರ, ಜುಲೈ 6

ಮುಖರ್ಜಿ ಪ್ರೇರಣೆ, ಆಚಾರ್ಯ ಮಾರ್ಗದರ್ಶನ ಕಾರ್ಯಕರ್ತರಿಗೆ ಸ್ಪೂರ್ತಿ
ಉಡುಪಿ: ಭಾರತೀಯ ಜನಸಂಘದ ಸಂಸ್ಥಾಪಕ ಡಾl ಶ್ಯಾಮಪ್ರಸಾದ್ ಮುಖರ್ಜಿ ಪ್ರೇರಣೆ ಹಾಗೂ ನವ ಉಡುಪಿ ನಿರ್ಮಾತೃ ಡಾ. ವಿ. ಎಸ್. ಆಚಾರ್ಯ ಮಾರ್ಗದರ್ಶನ ಪಕ್ಷ ಪ್ರಮುಖರು ಮತ್ತು ಕಾರ್ಯಕರ್ತರಿಗೆ ಸದಾ ಸ್ಪೂರ್ತಿದಾಯಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಡಾ. ವಿ. ಎಸ್. ಆಚಾರ್ಯ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆಹರು ಸಂಪುಟದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿಯಾಗಿದ್ದ ಡಾ. ಮುಖರ್ಜಿಯವರು ನೆಹರು ಅವರ ತುಷ್ಟೀಕರಣ ನೀತಿ, ಪಾಶ್ಚಾತ್ಯ ವಿಚಾರಧಾರೆ ಹಾಗೂ ಜಮ್ಮು ಕಾಶ್ಮೀರ ವಿಚಾರದ ನಿಲುವನ್ನು ವಿರೋಧಿಸಿ ಸಂಪುಟಕ್ಕೆ ರಾಜೀನಾಮೆ ನೀಡಿದರು.

ನೆಹರು ಮತ್ತು ಕಾಂಗ್ರೆಸ್ ಧೋರಣೆಯಿಂದ ದೇಶದ ಅಖಂಡತೆ, ಸುಭಿಕ್ಷೆ ಮತ್ತು ಸಂಸ್ಕೃತಿಯ ವಿಚಾರಕ್ಕೆ ತೊಂದರೆಯಾಗುತ್ತದೆ ಎಂದರಿತ ಶ್ಯಾಮಪ್ರಸಾದ್ ಮುಖರ್ಜಿ, ಭಾರತೀಯ ಜನಸಂಘ ಸ್ಥಾಪಿಸಿದರು.

ಒಂದು ದೇಶದಲ್ಲಿ ಒಂದೇ ಪ್ರಧಾನಿ, ಒಂದೇ ಸಂವಿಧಾನ ಮತ್ತು ಒಂದೇ ಧ್ವಜ ಇರಬೇಕು. ಕಾಶ್ಮೀರ, ಭಾರತದ ಅವಿಭಾಜ್ಯ ಅಂಗ ಮಾತ್ರವಲ್ಲದೇ ಭಾರತದ ಸಂವಿಧಾನವೇ ಪೂರ್ಣವಾಗಿ ಅಲ್ಲಿಗೂ ಅನ್ವಯವಾಗಬೇಕು ಎಂಬ ತತ್ವ ಸಿದ್ಧಾಂತದೊಂದಿಗೆ ಡಾ. ಮುಖರ್ಜಿ, ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿ ಹಾಗೂ ವಿಶೇಷ ಸ್ಥಾನಮಾನ ರದ್ದು ಮಾಡುವಂತೆ ಹೋರಾಟ ರೂಪಿಸಿದ್ದರು.

ಜಮ್ಮು ಮತ್ತು ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕೆಂಬ ಅವರ ಮಹಾತ್ವಾಕಾಂಕ್ಷೆಯ ಹೋರಾಟದಲ್ಲಿ ಕಾಶ್ಮೀರ ಪ್ರವೇಶಿಸಿದ ಸಂದರ್ಭದಲ್ಲಿ ಅವರ ಬಂಧನ, ಬಳಿಕ ನಡೆದ ಅವರ ನಿಗೂಢ ಸಾವಿನ ಬಗ್ಗೆ ದೇಶದ ಜನತೆಗೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ ಎಂದರು.

ಡಾ. ಮುಖರ್ಜಿ ಆಶಯದಂತೆ ಇಂದು ಬಿಜೆಪಿ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಯುತ್ತಿವೆ ಎಂದು ಕುಯಿಲಾಡಿ ಹೇಳಿದರು.ಪ್ರಭಾವಿ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದ ಡಾ. ವಿ.ಎಸ್. ಆಚಾರ್ಯ ಉತ್ತಮ ಆಡಳಿತಗಾರರಾಗಿ ಸ್ಟೇಟ್ ಮೆನ್ ಎನಿಸಿಕೊಂಡಿದ್ದರು. ರಾಜ್ಯ ಸರಕಾರದ ಕ್ಲಿಷ್ಟಕರ ವಿಚಾರಗಳಲ್ಲಿ ಎಲ್ಲರೂ ಒಪ್ಪುವಂಥ ಸಲಹೆ ಸೂಚನೆ ನೀಡುತ್ತಿದ್ದರು‌.

ಉಡುಪಿ ನಗರಸಭೆಯ ಅಧ್ಯಕ್ಷರಾಗಿ, ವಿಧಾನಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಗೃಹ ಸಚಿವರಾಗಿ ಸೇವೆ ಸಲ್ಲಿಸಿರುವ ಡಾ. ಆಚಾರ್ಯರ ವ್ಯಕ್ತಿತ್ವ ಮತ್ತು ಮಾರ್ಗದರ್ಶನ ಪಕ್ಷ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಸಲೀಂ ಅಂಬಾಗಿಲು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಇದ್ದರು.

ಬಿಜೆಪಿ ಜಿಲ್ಲಾ ಸಹ ವಕ್ತಾರ ಹಾಗೂ ಕಾರ್ಯಕ್ರಮ ಸಹ ಸಂಚಾಲಕ ಗಿರೀಶ್ ಎಂ. ಅಂಚನ್ ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ನಿರೂಪಿಸಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!