ಉಡುಪಿ: ಕೋವಿಡ್ ನಿರ್ವಹಣೆ ವಿಷಯದಲ್ಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ನೇಣಿಗೆ ಶರಣಾಗುವ ಬದಲು ರಾಜೀನಾಮೆ ನೀಡಿ, ಜನತೆಗೆ ಶರಣಾಗುವುದು ಒಳಿತು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ವ್ಯಂಗ್ಯವಾಡಿದ್ದಾರೆ.
ಕೋವಿಡ್ ಎರಡನೇ ಅಲೆಯ ತೀವ್ರತೆ ಬಗ್ಗೆ ತಜ್ಞರ ವರದಿ ಹಾಗೂ ಸಲಹೆ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳದೆ ಅಸಡ್ಡೆ ತೋರಿಸಿ, ಸಹಸ್ರಾರು ಮಂದಿಯ ಸಾವಿಗೆ ಕಾರಣವಾಗಿರುವ ಮತ್ತು ಜನರನ್ನು ದುಃಸ್ಥಿತಿಗೆ ತಳ್ಳಿರುವ ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯವೈಖರಿಯಿಂದಾಗಿ ವಿಶ್ವದ ಮುಂದೆ ಭಾರತ ತಲೆ ತಗ್ಗಿಸುವಂತಾಗಿದೆ. ಈ ಕುರಿತು ಬೇಜವಾಬ್ದಾರಿತ ಹೇಳಿಕೆ ನೀಡಿದ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ತನ್ನ ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಸೊರಕೆ ಒತ್ತಾಯಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸಿನ್ ಇಲ್ಲ, ಔಷಧಿ ಇಲ್ಲ, ಆಂಬ್ಯುಲೆನ್ಸ್ ಇಲ್ಲ. ಒಟ್ಟಾರೆ ಕೋವಿಡ್ ನಿರ್ವಹಣೆಗೆ ಯಾವುದು ಅತ್ಯಗತ್ಯವೊ ಅದಾವುದೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಸರ್ಕಾರದ ಆಡಳಿತವೇ ಪ್ರಮುಖ ಕಾರಣ.
ಇದನ್ನೆಲ್ಲಾ ಮನಗಂಡು ಮೂಕಪ್ರೇಕ್ಷಕವಾಗದ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಮಧ್ಯಸ್ಥಿಕೆ ವಹಿಸಿ ತಜ್ಞರು ಮತ್ತು ಅನುಭವಿ ವೈದ್ಯರನ್ನೊಳಗೊಂಡ ಟಾಸ್ಕ್ ಫೋರ್ಸ್ ರಚಿಸಿ ಕಾರ್ಯಪ್ರವೃತ್ತರಾಗುವಂತೆ ನಿರ್ದೇಶನ ನೀಡಿದೆ.
ಇಂಥ ಪರಿಸ್ಥಿತಿಯಲ್ಲಿ ಕೇಂದ್ರದ ಹಿರಿಯ ಸಚಿವ ಡಿ. ವಿ. ಸದಾನಂದ ಗೌಡ `ನಾವೇನು ನೇಣು ಹಾಕಿಕೊಂಡು ಸಾಯಬೇಕಾ’ ಎಂದು ಕೇಳಿದರೆ, ರಾಜ್ಯದ ಮತ್ತೊಬ್ಬ ಬಿಜೆಪಿ ನಾಯಕ, ಚಿಕ್ಕಮಗಳೂರು ಶಾಸಕ ಸಿ. ಟಿ. ರವಿ ನ್ಯಾಯಾಧೀಶರನ್ನೇ ಅಣಕಿಸಿ ಮಾತನಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮತ್ತು ನ್ಯಾಯಾಂಗ ನಿಂದನೆ ಮಾಡಿದ್ದಾರೆ.
ಸರ್ಕಾರದ ಹೊಣೆಗೇಡಿತನದ ನೀತಿಗಳಿಂದಾಗಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರ ಒಂದು ಕ್ಷಣವೂ ಅಧಿಕಾರದಲ್ಲಿರಲು ನೈತಿಕತೆ ಉಳಿಸಿಕೊಂಡಿಲ್ಲ. ಹಾಗಾಗಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಸೊರಕೆ ಆಗ್ರಹಿಸಿದ್ದಾರೆ