Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ನೇಕಾರರು ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ

ನೇಕಾರರು ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ

ಸುದ್ದಿಕಿರಣ ವರದಿ
ಸೋಮವಾರ, ಏಪ್ರಿಲ್ 11

ನೇಕಾರರು ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ
ಕಾಪು: ಪ್ರಸಕ್ತ ವರ್ಷದಿಂದ ನೇಕಾರರು ಹಾಗೂ ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೀನುಗಾರಿಕೆಯನ್ನು ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ 100 ಆಳ ಸಮುದ್ರ ಮೀನುಗರಿಕೆ ದೋಣಿಗಳನ್ನು ಒದಗಿಸಲಾಗುವುದು. ರಾಜೀವ ಗಾಂಧಿ ವಸತಿ ಯೋಜನೆಯಡಿ ಮೀನುಗಾರರಿಗೆ 5 ಸಾವಿರ ಮನೆ ನಿರ್ಮಿಸಲಾಗುವುದು.

ಮೀನುಗಾರರ 8 ಬಂದರುಗಳಲ್ಲಿ ಹೂಳು ತೆಗೆಯುವ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಮೀನುಗಾರ ವೃತ್ತಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ.

ಪ್ರತಿ ಗ್ರಾಮ ಪಂಚಾಯತ್ ಕೆರೆಗಳಲ್ಲಿ ಮೀನುಗಾರರಿಗೆ ಕೆರೆಗಳನ್ನು ಮೀಸಲಿಟ್ಟು, ಮೀನು ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಮಹಿಳಾ ಸಬಲೀಕರಣ
ಸ್ತ್ರೀಶಕ್ತಿ ಸಂಘಗಳ ಸಾಲ ಮರುಪಾವತಿ ಶೇ. 95ರಷ್ಟಿದೆ. ಇದು ಮಹಿಳೆಯರ ಪರಿಶ್ರಮ ಹಾಗೂ ಪ್ರಮಾಣಿಕತೆಯನ್ನು ತೋರಿಸುತ್ತದೆ. ರಾಜ್ಯದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ಆ್ಯಂಕರ್ ಬ್ಯಾಂಕ್ ಜೋಡಿಸಿ ಸ್ತ್ರೀ ಶಕ್ತಿ ಸಂಘಗಳಿಗೆ 1.5 ಲಕ್ಷ ರೂ.ಗಳಷ್ಟು ಸಾಲ ಸೌಲಭ್ಯ ನೀಡಲಾಗುವುದು. ಅದರಿಂದ ಸುಮಾರು 4 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ.

ಕೇವಲ ಜೀವನೋಪಾಯಕ್ಕಾಗಿ ಅಲ್ಲ, ಆರ್ಥಿಕ ಅಭಿವೃದ್ಧಿ ಸಾಧಿಸುವ ಮೂಲಕ ಮಹಿಳಾ ಸಬಲೀಕರಣದ ಧ್ಯೇಯವನ್ನು ಸರ್ಕಾರ ಹೊಂದಿದೆ ಎಂದರು.

ಉಚ್ಚಿಲ ದೇವಳಕ್ಕೆ 5 ಕೋ.
ರಾಜ್ಯದಲ್ಲಿ 100 ಡಾ| ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯ ಆರಂಭಿಸಲಾಗುವುದು. ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 1 ಸಾವಿರ ಹಾಸ್ಟೆಲ್ ಗಳ ಕ್ಲಸ್ಟರ್ ನಿರ್ಮಿಸಲಾಗುವುದು.

ಮೊಗವೀರ ಸಮುದಾಯದ ಮಕ್ಕಳಿಗೆ ವಸತಿ ನಿಲಯ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪೂರೈಸಲಾಗುವುದು. ಮೀನುಗಾರರಿಗೆ 10 ತಿಂಗಳಿಗೆ ಬೇಕಾಗುವ ಡೀಸೆಲ್ ವೆಚ್ಚದ ಸಬ್ಸಿಡಿ ನೀಡಲಾಗುವುದು.

ಮೊಗವೀರರು ಶ್ರಮಜೀವಿಗಳು. ಕರಾವಳಿಯ ಆರ್ಥಿಕ ಪುನಃಶ್ಚೇತನದಲ್ಲಿ ಮೊಗವೀರರ ಕೊಡುಗೆ ಅಪಾರ. ಸರಕಾರ ಮತ್ತು ದಾನಿಗಳ ಸಹಿತವಾಗಿ ಪ್ರತಿಯೊಬ್ಬ ಸಮಾಜ ಬಾಂಧವರ ಶ್ರಮದ ಫಲವಾಗಿ ಮಹಾಲಕ್ಷ್ಮೀ ದೇವಸ್ಥಾನ ನಿರ್ಮಾಣಗೊಂಡಿದ್ದು ಇದು ಸಮುದಾಯದ ಒಗ್ಗಟ್ಟನ್ನು ತೋರಿಸಿಕೊಟ್ಟಿದೆ. ಡಾ| ಜಿ. ಶಂಕರ್ ನೇತೃತ್ವದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಸಹಿತ ಮೊಗವೀರ ಸಮುದಾಯದ ಬೇಡಿಕೆಯಂತೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಮುಂದುವರಿದ ಜೀರ್ಣೋದ್ಧಾರ ಕಾಮಗಾರಿಗಾಗಿ 5 ಕೋಟಿ ರೂ. ಅನುದಾನ ಹಾಗೂ ವಿದ್ಯಾರ್ಥಿ ನಿಲಯ ಸ್ಥಾಪನೆ, ಮೊಗವೀರ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಡೀಸೆಲ್ ಸಬ್ಸಿಡಿ ಹೆಚ್ಚಳ ಸಹಿತ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಸಮಸ್ಯೆಗೆ ಪರಿಹಾರ ಒದಗಿಸುವ ಚಿಂತನೆ ನಾಯಕನಿಗಿರಬೇಕು. ಕೋವಿಡ್ ಸೇರಿದಂತೆ ಯಾವುದೇ ಸಂಕಷ್ಟದ ಸಮಯದಲ್ಲಿನ ಸ್ಪಂದನೆಯಿಂದ ಸರ್ಕಾರದ ಜೀವಂತಿಕೆ ನಿರೂಪಿತವಾಗುತ್ತದೆ. ಕೋವಿಡ್ ಅಲೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ.

ಆರ್ಥಿಕತೆಯ ಅಭಿವೃದ್ಧಿಗಾಗಿ ಶ್ರಮವಹಿಸಿ ಸುಮಾರು 15 ಸಾವಿರ ಕೋಟಿಗೂ ಮೀರಿದ ಆರ್ಥಿಕತೆಯನ್ನು ಸರ್ಕಾರ ತಲುಪಿದೆ. ರೈತರಿಗೆ ಡೀಸೆಲ್ ವೆಚ್ಚ, ಕೋವಿಡ್ ನಲ್ಲಿ ಪ್ರಾಣ ಕಳೆದುಕೊಂಡವರಿಗೆ ಪರಿಹಾರ, ಪ್ರವಾಹದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ ನೀಡಲಾಗಿದೆ ಎಂದರು.

ಸಚಿವರಾದ ಸುನಿಲ್ ಕುಮಾರ್ ಮತ್ತು ಶ್ರೀರಾಮುಲು, ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಬಿ.ಎಂ. ಸುಕುಮಾರ ಶೆಟ್ಟಿ, ಭರತ್ ಶೆಟ್ಟಿ ಮತ್ತು ವೇದವ್ಯಾಸ ಕಾಮತ್, ಮಂಗಳೂರು ಮಂಗಳೂರು ಮಹಾನಗರಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಗಂಗಾ ಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ. ಮೌಲಾಲಿ, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎ. ಸಿ. ಕುಂದರ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್ ಮೊದಲಾದವರಿದ್ದರು.

ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಮುಂದುವರಿದ ಅಭಿವೃದ್ಧಿ ಯೋಜನೆಗಳು ಮತ್ತು ಮೊಗವೀರ ಸಮಾಜದ ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಯಿತು.

ನಾಡೋಜ ಡಾ| ಜಿ. ಶಂಕರ್ ಸ್ವಾಗತಿಸಿ, ಪ್ರಸ್ತಾವನೆಗೈದರು.

ದ.ಕ. ಮೊಗವೀರ ಮಹಾಜನ ಸಂಘ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು. ದಾಮೋದರ ಶರ್ಮಾ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!