Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸಿ

ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸಿ

ಉಡುಪಿ: ಪ್ರಸಕ್ತ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.

ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತಂತೆ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶುಕ್ರವಾರ ವೀಡಿಯೊ ಸಂವಾದ ನಡೆಸಿದರು.

ಮಳೆಗಾಲದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ಹರಡದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪ್ರಸ್ತುತ 11 ಮಲೇರಿಯಾ ಪ್ರಕರಣ ವರದಿಯಾಗಿದ್ದು, 103 ಡೆಂಗ್ಯೂ ಪ್ರಕರಣ ವರದಿಯಾಗಿದೆ. ಡೆಂಗ್ಯೂ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಡೆಂಗ್ಯೂ ಹೆಚ್ಚಿರುವ ಗ್ರಾ. ಪಂ. ವ್ಯಾಪ್ತಿಯಲ್ಲಿ ತುರ್ತು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ನೀರು ನಿಲ್ಲದಂತೆ ಹಾಗೂ ಸೊಳ್ಳೆ ನಿಯಂತ್ರಣ ಮತ್ತು ನಾಶ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಲಾರ್ವಿಸೈಡ್ ಸಿಂಪಡಣೆ ಮಾಡಬೇಕು. ಸಾರ್ವಜನಿಕರಿಗೆ ಕರಪತ್ರ ಮೂಲಕ ಜಾಗೃತಿ ಮೂಡಿಸಬೇಕು ಹಾಗೂ ರಸ್ತೆಬದಿಯಲ್ಲಿ ತೆರೆದ ವಾತಾವರಣದಲ್ಲಿ ಆಹಾರ ಪದಾರ್ಥಗಳ ವ್ಯಾಪಾರ ನಡೆಸದಂತೆ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗ ಕುರಿತು ಅರಿವು ಮೂಡಿಸಬೇಕು. ಜಿಲ್ಲೆಯ ಗಣಿ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಅನವಶ್ಯಕ ಕ್ವಾರಿಗಳನ್ನು ಮುಚ್ಚಬೇಕು ಹಾಗೂ ಕ್ವಾರಿಗಳಲ್ಲಿ ಲಾರ್ವಾ ಮೀನು ಬಿಡಲು ಕ್ರಮ ಕೈಗೊಳ್ಳಬೇಕು ಎಂದರು.

ಕೈಗಾರಿಕೆ ಮತ್ತು ಕಾಮರ್ಿಕ ಇಲಾಖೆ ವತಿಯಿಂದ ಕಾರ್ಮಿಕರು ವಾಸ ಮಾಡುವ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವ ಕುರಿತಂತೆ ಅರಿವು ಮೂಡಿಸಬೇಕು. ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಬೇರೆ ರಾಜ್ಯದಿಂದ ಹೊಸದಾಗಿ ಕಾರ್ಮಿಕರು ಆಗಮಿಸಿದ್ದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ತಕರ್ತೆಯರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಬೇಕು. ಸಮಾಜ ಕಲ್ಯಾಣ ಮತ್ತು ಹಿಂದುಗಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ ವಿತರಿಸಲು ಸೂಚಿಸಿದರು.

ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಆಗಮಿಸುತ್ತಿದ್ದು, ಅವರು ಬೇರೆ ಕಡೆಯಿಂದ ಸಾಂಕ್ರಾಮಿಕ ರೋಗಪೀಡಿತರಾಗಿ ಬಂದು ಇಲ್ಲೂ ರೋಗ ಹರಡುವ ಸಾಧ್ಯತೆಗಳಿದ್ದು, ಅವರನ್ನು ಸೂಕ್ತ ರೀತಿಯಲ್ಲಿ ಆರೋಗ್ಯ ಪರೀಕ್ಷೆಗೊಳಪಡಿಸಬೇಕು. ಬಂದರು ಪ್ರದೇಶದಲ್ಲಿ ಬೋಟ್ ಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಲಿದ್ದು, ಆ ಪ್ರದೇಶಗಳಲ್ಲಿ ಹೆಚ್ಚಿನ ಗಮನಹರಿಸಿ ಸೊಳ್ಳೆ ಉತ್ಪತ್ತಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.

ಮೀನುಗಾರಿಕೆ ಇಲಾಖೆ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಾರ್ವಾ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬೂಷಿಯಾ ಮೀನು ಬೆಳೆಸಿ, ಜಿಲ್ಲೆಯಾದ್ಯಂತ ಲಭ್ಯವಾಗುವಂತೆ ಮತ್ತು ಆರೋಗ್ಯ ಇಲಾಖೆಗೆ ಒದಗಿಸುವಂತೆ ಹಾಗೂ ಸಾರ್ವಜನಿಕರಿಗೆ ಈ ಮೀನು ದೊರೆಯುವ ಸ್ಥಳಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿ. ಜಗದೀಶ್ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ ಜಿ. ಪಂ. ಸಿಇಓ ಡಾ. ನವೀನ್ ಭಟ್, ಸಂಬಂಧಪಟ್ಟ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ವತಿಯಿಂದ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್.ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!