Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಹಡಪದ ಅಪ್ಪಣ್ಣ ವಚನಗಳ ಅರಿವು ಸ್ವಾಗತಾರ್ಹ

ಹಡಪದ ಅಪ್ಪಣ್ಣ ವಚನಗಳ ಅರಿವು ಸ್ವಾಗತಾರ್ಹ

ಸುದ್ದಿಕಿರಣ ವರದಿ
ಬುಧವಾರ, ಜುಲೈ 13

ಹಡಪದ ಅಪ್ಪಣ್ಣ ವಚನಗಳ ಅರಿವು ಸ್ವಾಗತಾರ್ಹ
ಉಡುಪಿ: ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಯನ್ನು ಸರಕಾರ ಈ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದೆ. ಶಿವಶರಣರಲ್ಲಿ ಹಡಪದ ಅಪ್ಪಣ್ಣ ಬಗ್ಗೆ ಯಾರಿಗೂ ತಿಳಿಯದೇ ಇರುವಾಗ ಸರಕಾರ ಮುಂದೆ ಬಂದು ಅವರ ಹಾಗೂ ಅವರ ವಚನಗಳ ಕುರಿತು ಎಲ್ಲರಲ್ಲಿಯೂ ಅರಿವು ಮೂಡಿಸುವ ಕೆಲಸ ಸ್ವಾಗತಾರ್ಹ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾಂಶುಪಾಲ ಡಾ| ಸುರೇಶ್ ರೈ ಕೆ. ಹೇಳಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಯಕಕ್ಕೆ ಮಹತ್ವದ ಸ್ಥಾನ
ಬಸವ ಪ್ರಿಯ ಕೂಡಲಚೆನ್ನ ಬಸವಣ್ಣ ಅವರ ಅಂಕಿತನಾಮವಾಗಿದ್ದು, ಕಾಯಕ ಮಾಡದೇ ದಾಸೋಹ ಮಾಡುವಂತಿಲ್ಲ ಎಂಬ ತತ್ವ ಪಾಲಿಸಿ, ಕಾಯಕಕ್ಕೆ ಮಹತ್ವದ ಸ್ಥಾನ ನೀಡಿದ್ದರು.

12ನೇ ಶತಮಾನದ ಶರಣರ ಕಾಲದಲ್ಲಿ ಅವರನ್ನು ಗುರುತಿಸಿದ್ದರೂ ಇಂದಿಗೆ ಅವರ ಬಗ್ಗೆ ಮಾಹಿತಿ ಕಡಿಮೆ ಇದೆ. ಹಾಗಾಗಿ ಇಂಥ ಮಹಾನ್ ವ್ಯಕ್ತಿಗಳ ಬಗ್ಗೆ ಸಂಶೋಧಿಸಿ, ವಿಷಯಗಳನ್ನು ಕಲೆಹಾಕಿ, ಅದನ್ನು ಇತರರಿಗೂ ತಿಳಿಸುವ ಕೆಲಸವಾಗಬೇಕು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಇಂಥ ಮಹಾನ್ ವ್ಯಕ್ತಿಗಳ ಬಗ್ಗೆ ಗಂಭೀರವಾಗಿ ಅಭ್ಯಸಿಸಬೇಕು ಎಂದರು.

ವಚನ ಸಾಹಿತ್ಯಕ್ಕೆ ನಾಂದಿ
ನಿವೃತ್ತ ಕನ್ನಡ ಉಪನ್ಯಾಸಕಿ ಹಾಗೂ ಲೇಖಕಿ ಡಾ| ರೇಖಾ ವಿ ಬನ್ನಾಡಿ ಶಿವಶರಣ ಹಡಪದ ಅಪ್ಪಣ್ಣ ಕುರಿತು ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿಯಾದಂತೆ ಆರ್ಥಿಕ ಸ್ಥಿತಿಯೂ ಬೆಳವಣಿಗೆಗೊಂಡಿತು.

ಆ ಬೆಳವಣಿಗೆಯಿಂದ ಹೊಸ ಚಿಂತನೆಗಳು ರೂಪುಗೊಂಡವು. ಆ ಹೊಸ ಹೊಸ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಸಲು ಮುಂದಾದಾಗ ತಡೆಯಾದಂಥ ಸ್ಥಾಪಿತ ಕಂದಾಚಾರಗಳ ಮಧ್ಯೆ ಉಂಟಾದ ಘರ್ಷಣೆಯಿಂದ ವಚನ ಚಳುವಳಿ ಉಂಟಾಗಿ, ವಚನ ಸಾಹಿತ್ಯಕ್ಕೆ ನಾಂದಿಯಾಯಿತು ಎಂದರು.

ವಚನಕಾರರು ಕಾಯಕವನ್ನು ಗೌರವಿಸುವವರು ಹಾಗೂ ಕಾಯಕದಿಂದಲೇ ತಮ್ಮನ್ನು ತಾವು ಗುರುತಿಸಿಕೊಂಡವರು. ಶ್ರೇಷ್ಠ ವಚನಕಾರರೆಲ್ಲರೂ ತಮ್ಮ ಕಸುಬು ಹಾಗೂ ವೃತ್ತಿಯನ್ನು ಆತ್ಮ ಜಾಗೃತಿಯ ಅಸ್ತ್ರವನ್ನಾಗಿ ಬಳಸಿಕೊಂಡವರು.

ವೃತ್ತಿಯಿಂದ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಅಳೆಯುವ ಪ್ರಕ್ರಿಯೆಯನ್ನು ನಿರಾಕರಿಸಿ, ಭಿನ್ನವಾಗಿ ಜಗತ್ತನ್ನು ನೋಡುವ ನೋಟ ಕೊಟ್ಟು, ಮನುಷ್ಯನಿಗೆ ಹುಟ್ಟು, ಕುಲ ಹಾಗೂ ವೃತ್ತಿ ಮುಖ್ಯ ಅಲ್ಲ ಎಂದು ಸಾರಿದವರು ಎಂದರು.

ಸೇವಾ ನಿಷ್ಠೆಗೆ ಹೆಸರು
ಹಡಪದ ಅಪ್ಪಣ್ಣ ಅನುಭವ ಮಂಟಪದ ಒಬ್ಬ ಸಕ್ರಿಯ ಸದಸ್ಯರಾಗಿದ್ದು, ಬಸವಣ್ಣನವರ ನಿಕಟವರ್ತಿಯಾಗಿದ್ದರು. ಪತ್ನಿ ಲಿಂಗಮ್ಮ ಶಿವಶರಣೆ ಹಾಗೂ ವಚನಗಾರ್ತಿಯಾಗಿದ್ದರು. 1160 ಅಪ್ಪಣ್ಣನ ಕಾಲ ಎಂದು ತಿಳಿದು ಬರುತ್ತದೆ ಹಾಗೂ ಅವರ 246 ವಚನಗಳು ಲಭ್ಯವಿದ್ದು, ಹಡಪದ ವೃತ್ತಿಯನ್ನು ಮಾಡಿಕೊಂಡು ಬಂದ ಅವರು ತಮ್ಮ ಕಾಯಕ, ಜೀವನ ಹಾಗೂ ಸೇವಾ ನಿಷ್ಠೆಗೆ ಹೆಸರಾಗಿದ್ದವರು.

ಅಪ್ಪಣ್ಣನ ವಚನದಲ್ಲಿ ಅನುಭಾವ, ಸಾಮಾಜಿಕ ಚಿಂತನೆಯ ಹೊಳಪು, ಸಾಂಸ್ಥಿಕ ಮತ ಮತ್ತು ಪಂಥಗಳನ್ನು ನೇರವಾಗಿ ಖಂಡಿಸಿ, ಅದಕ್ಕೆ ಪರ್ಯಾಯವಾಗಿ ಜಂಗಮತೆ, ಸರಳತೆ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಸಾಂಸ್ಥಿಕ ದೇವರುಗಳ ನಿರಾಕರಣೆ ಹಾಗೂ ಸರಳ ಭಾಷೆಯ ಬಳಕೆಯನ್ನು ಅಪ್ಪಣ್ಣನ ವಚನದಲ್ಲಿ ಮುಖ್ಯವಾಗಿ ಕಾಣಬಹುದು ಎಂದರು.

ಕಾಲೇಜಿನ ಗ್ರಂಥಪಾಲಕ ಶ್ರೀಕೃಷ್ಣ ವಚನ ಗಾಯನ ಮಾಡಿದರು.

ಕಾಲೇಜಿನ ಉಪನ್ಯಾಸಕಿ ಮೇರಿ ಮಿರಾಂದ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕನ್ನಡ ಸಹ ಪ್ರಾಧ್ಯಾಪಕ ಡಾ| ವೆಂಕಟೇಶ್ ಎಚ್. ಕೆ, ನಿರೂಪಿಸಿದರು. ಉಮೇಶ್ ಪೈ ವಂದಿಸಿದರು.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!