Monday, July 4, 2022
Home ಸಮಾಚಾರ ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ

ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ

ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ

(ಸುದ್ದಿಕಿರಣ ವರದಿ)
ಉಡುಪಿ: ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅವಧಿಯಲ್ಲಿ ನಡೆದ ಜಾತಿ ಜನಗಣತಿ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ನಂತರ ಅದರ ಬಿಡುಗಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ಜಾತಿ ಜನಗಣತಿಯ ಜವಾಬ್ದಾರಿಯನ್ನು ಅಂದಿನ ಆಯೋಗದ ಅಧ್ಯಕ್ಷ ಕಾಂತರಾಜು ಅವರಿಗೆ ವಹಿಸಲಾಗಿತ್ತು. ಆಗಲೇ ಜಾತಿ ಗಣತಿ ಪೂರ್ಣಗೊಂಡು ವರದಿ ಸಿದ್ಧವಾಗಿತ್ತು. ಆದರೆ, ಸರ್ಕಾರಕ್ಕೆ ವರದಿ ಮಂಡನೆಯಾಗಿಲ್ಲ ಎಂದರು.

ಆ ಸಂದರ್ಭದಲ್ಲಿ ನಾವು ಜಾತಿ ಜನಗಣತಿ ವರದಿ ಬಿಡುಗಡೆಗೆ ಆಗ್ರಹಿಸಿದ್ದೆವು. ಯಾಕೆ ಮಂಡನೆ ಮತ್ತು ಬಿಡುಗಡೆ ಮಾಡಿಲ್ಲವೋ ಗೊತ್ತಿಲ್ಲ ಎಂದ ಸಚಿವ ಕೋಟ, ಪ್ರಸಕ್ತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಇದ್ದಾರೆ. ಈ ಬಗ್ಗೆ ಕೆಲವು ಪ್ರಕರಣಗಳು ಹೈಕೋರ್ಟಿನಲ್ಲಿ ದಾಖಲಾಗಿವೆ. ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ನಂತರ ಬಿಡುಗಡೆ ಮಾಡುವ ಕುರಿತು ನಿರ್ಣಯ ಕೈಗೊಳ್ಳುತ್ತೇವೆ ಎಂದರು.

ನಮ್ಮದು ಜನಾಶೀರ್ವಾದ ಸರ್ಕಾರ
ಜನಾಶೀರ್ವಾದ ಯಾತ್ರೆಯಲ್ಲ, ಜನದ್ರೋಹ ಯಾತ್ರೆ ಎಂಬ ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಗ್ರಪ್ಪನವರು ಅವರದೇ ಆದ ರೀತಿಯಲ್ಲಿ ವಿಮರ್ಶೆ ಮಾಡಿದ್ದಾರೆ. ಅವರೂ ಸೇರಿದಂತೆ ಅವರ ಕೆಲವು ಕಾಂಗ್ರೆಸ್ ಮುಖಂಡರು ಕಾಲ ಕಾಲಕ್ಕೆ ಸರ್ಟಿಫಿಕೇಟು ಕೊಡುತ್ತಾರೆ. ಅದು ಅವರೆಲ್ಲರ ಭಾವನೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.

ನಮ್ಮದು ಜನಾಶೀರ್ವಾದ ಇರುವ ಸರ್ಕಾರ. ಜನರ ಮಧ್ಯೆ ನಿಂತು ಸಮಸ್ಯೆ ಬಗೆಹರಿಸುತ್ತೇವೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಜನಾಶೀರ್ವಾದದ ಸರ್ಕಾರ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮತ್ತು ತಾಲಿಬಾನ್ ಒಂದೇ ಸಂಸ್ಕೃತಿ ಎಂಬ ಕಾಂಗ್ರೆಸ್ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಇದು ತಾಲಿಬಾನ್ ಸಂಸ್ಕೃತಿಯನ್ನು ಪ್ರೀತಿಸುವವರ ಹೇಳಿಕೆ. ಆಗಾಗ ತಾಲಿಬಾನ್ ಮೇಲೆ ಇವರಿಗೆ ಒಳ್ಳೆಯ ಭಾವನೆ ಬರುತ್ತದೆ. ಅಲ್ಲಿಯ ದುರಂತವನ್ನು ನೋಡಿಯಾದರೂ ಈ ಸಂಸ್ಕೃತಿಯನ್ನು ಬೆಂಬಲಿಸಬೇಡಿ ಎಂದು ಸಲಹೆ ನೀಡಿದರು.

ಮಾರ್ಗಸೂಚಿ ಪಾಲಿಸಿ
ಕೊಡಗು, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 2.5ಕ್ಕಿಂತ ಜಾಸ್ತಿ ಇದೆ. ಆ ಕಾರಣಕ್ಕಾಗಿ ಶಾಲೆ ಪ್ರಾರಂಭ ಮಾಡಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭವಾಗಿದೆ. ನಮ್ಮ ಜಿಲ್ಲೆಗಳಿಗೆ ಇದೊಂದು ಸಾಂಕೇತಿಕ ಎಚ್ಚರಿಕೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾಸಿಟಿವಿಟಿ ದರ ಕಡಿಮೆಯಾಗಬೇಕು. ಶೀಘ್ರ ಶಾಲೆ ಪ್ರಾರಂಭಿಸಲು ನಮಗೆ ಆಸಕ್ತಿ ಇದೆ. ಪಾಸಿಟಿವಿಟಿ ರೇಟ್ ಇಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!