ಉಡುಪಿ: ವ್ಯಕ್ತಿಯೋರ್ವ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟು ಶವ ಸಂಸ್ಕಾರ ನಡೆಸಲು ಅಸಹಾಯಕರಾದ ಮಕ್ಕಳಿಗೆ ಸ್ವಂದಿಸಿದ ವಿಶು ಶೆಟ್ಟಿ ಅಂಬಲಪಾಡಿ, ತಾನೇ ಮುಂದೆ ಬಂದು ಎಲ್ಲಾ ಖರ್ಚು ಭರಿಸಿ ಶವ ಸಂಸ್ಕಾರ ನೆರವೆರಿಸಿದ ಘಟನೆ ಭಾನುವಾರ ಇಲ್ಲಿನ ಬೀಡಿನಗುಡ್ಡೆ ಸ್ಮಶಾನದಲ್ಲಿ ನಡೆದಿದೆ.
ಮೃತ ವ್ಯಕ್ತಿ ಪಿಲಾರ್ ಖಾನ್ ನಿವಾಸಿ ಮಂಜುನಾಥ (45), ಕೂಲಿ ಕಾರ್ಮಿಕನಾಗಿದ್ದು ಅನಾರೋಗ್ಯಕ್ಕೆ ತುತ್ತಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದ.
ಮೃತರ ಸಣ್ಣ ಮಕ್ಕಳು ತಂದೆಯ ಶವ ಸಂಸ್ಕಾರದ ಬಗ್ಗೆ ದುಃಖಿಸುತ್ತಿದ್ದು, ವಿಷಯ ತಿಳಿದ ವಿಶು ಶೆಟ್ಟಿ, ಮಕ್ಕಳ ಮೂಲಕ ಶವವನ್ನು ಆಸ್ಪತ್ರೆಯಿಂದ ಪಡೆದು ತಾನೇ ಮುಂದೆ ನಿಂತು ಮಕ್ಕಳ ಮೂಲಕವೇ ವಿಧಿ ವಿಧಾನ ನೆರವೇರಿಸಿ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ತೋರಿದ್ದಾರೆ.
ಮಕ್ಕಳಿಗೆ ಧೈರ್ಯದ ಸಾಂತ್ವನದ ಮಾತುಗಳನ್ನು ಹೇಳಿ, ಸಹಾಯ ಬೇಕಿದ್ದಲ್ಲಿ ಸ್ಪಂದಿಸುವ ಭರವಸೆ ನೀಡಿದ್ದಾರೆ.
ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದರು.
ಮೃತರ ಮಕ್ಕಳ ಭವಿಷ್ಯತ್ತಿನ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕೆಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ