ಉಡುಪಿ: ರಾಜ್ಯದಾದ್ಯಂತ ಕೊರೊನಾ 2ನೇ ಅಲೆಯ ಸಂಕಷ್ಟಕ್ಕೊಳಗಾಗಿರುವ ಕೃಷಿಕರು, ಕಟ್ಟಡ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು ಹಾಗೂ ಹಲವು ವೃತ್ತಿನಿರತ ಸಮುದಾಯಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ 1,250 ಕೋ. ಮೊತ್ತದ ಆರ್ಥಿಕ ಪರಿಹಾರ ಘೋಷಿಸಿರುವುದನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದ್ದಾರೆ.
ಕೋವಿಡ್ ಸಂಕಷ್ಟದ ನಡುವೆ ರಾಜ್ಯ ಸರ್ಕಾರದ ಆರ್ಥಿಕ ನೆರವಿನ ಪ್ಯಾಕೇಜ್ ನಿಂದ ರೈತರು ಮತ್ತು ಅಸಂಘಟಿತ ವಲಯಗಳ ಶ್ರಮಿಕರಿಗೆ ಪ್ರಯೋಜನವಾಗಲಿದೆ. ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಣೆ, ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಕಂತಿನ ಮೊತ್ತ ಜಮಾ ಇತ್ಯಾದಿ ಕ್ರಮಗಳು ಜನತೆಯಲ್ಲಿ ಭರವಸೆ ಮೂಡಿಸಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ 2ನೇ ಅಲೆಯ ಪರಿಣಾಮಕಾರಿ ನಿರ್ವಹಣೆಯಲ್ಲಿ ನಿರತವಾಗಿದೆ. ಕೋವಿಡ್ ಲಸಿಕೆಯ ವ್ಯವಸ್ಥಿತ ಪೂರೈಕೆಗೆ ಕ್ರಮ, ಆಕ್ಸಿಜನ್ ಮತ್ತು ವೆಂಟಿಲೇಟರ್, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹೆಚ್ಚಳ, ರೆಮಿಡಿಸಿವಿರ್ ಇಂಜೆಕ್ಷನ್ ಫೂರೈಕೆ ಇತ್ಯಾದಿ ತುರ್ತು ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ಕ್ರಿಯಾಶೀಲತೆಯಿಂದ ತೊಡಗಿಕೊಂಡಿದ್ದು ಜನತೆ ಪರಿಸ್ಥಿತಿಯ ನೈಜತೆ ಅರಿತುಕೊಂಡು ಆಡಳಿತ ವ್ಯವಸ್ಥೆ ಜೊತೆ ಕೈಜೋಡಿಸುವ ಅಗತ್ಯತೆ ಇದೆ ಎಂದು ಕುಯಿಲಾಡಿ ಮನವಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಸೂಚನೆಯಂತೆ ಉಡುಪಿ ಜಿಲ್ಲಾ ಬಿಜೆಪಿ ಸೇವಾ ಹೀ ಸಂಘಟನ್ ತತ್ವದಡಿ ಜಿಲ್ಲಾ, ಕೇಂದ್ರ, ಉಡುಪಿ ನಗರ, ಉಡುಪಿ ಗ್ರಾಮಾಂತರ, ಕಾಪು, ಕಾರ್ಕಳ, ಕುಂದಾಪುರ ಮತ್ತು ಬೈಂದೂರು ಮಂಡಲಗಳ ವ್ಯಾಪ್ತಿಯಲ್ಲಿ ತೆರೆದಿರುವ ಕೊರೊನಾ 2ನೇ ಅಲೆಯ ಸಹಾಯವಾಣಿ ಯಶಸ್ವೀ ನಿರ್ವಹಣೆಯೊಂದಿಗೆ ಸಾರ್ಥಕ ಜನಸೇವೆಯಲ್ಲಿ ತೊಡಗಿಕೊಂಡಿದೆ.
ಕೋವಿಡ್-19 ಸಹಾಯವಾಣಿ ಮೂಲಕ ಕೋವಿಡ್ ಲಸಿಕೆ ವಿತರಣೆ ಮಾಹಿತಿ, ಆಸ್ಪತ್ರೆ ಮತ್ತು ವೆಂಟಿಲೇಟರ್, ಅಂಬುಲೆನ್ಸ್ ಮತ್ತು ಬೆಡ್, ಐಸೋಲೇಶನ್ ಕೇಂದ್ರ, ಆಯುಷ್ಮಾನ್ ಭಾರತ್ ಯೋಜನೆ, ಆಹಾರ ಮತ್ತು ಔಷಧಿ ಪೂರೈಕೆ, ಕೋವಿಡ್ ನಿಬಂಧನೆ, ರಕ್ತದಾನ, ಅಂತ್ಯಸಂಸ್ಕಾರ ಮುಂತಾದ ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ಜಿಲ್ಲೆಯಾದ್ಯಂತ ಒದಗಿಸಲಾಗುತ್ತಿದೆ.
ಸಕಾಲಿಕ ವರ್ಚುವಲ್ ಸಭೆಗಳ ಮೂಲಕ ಎಲ್ಲಾ ಮಂಡಲಗಳ ಸಹಾಯವಾಣಿಯ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಕೊರೋನಾ ಮುಕ್ತ ಸಮಾಜ ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರು ಶ್ರಮಿಸುತ್ತಿದ್ದರೆ, ಕಾಂಗ್ರೆಸ್ ವೃಥಾ ಅಪಪ್ರಚಾರದಲ್ಲಿ ಮುಳುಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ