Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಅಸ್ತಂಗತ

ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಅಸ್ತಂಗತ

ಉಡುಪಿ: ಹಿರಿಯ ಸಾಹಿತಿ, ರಂಗಕರ್ಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಪ್ರಾಚಾರ್ಯ ಪ್ರೊ. ಉದ್ಯಾವರ ಮಾಧವ ಆಚಾರ್ಯ ಸೋಮವಾರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಕಳೆದ ಸುಮಾರು 3 ವರ್ಷಗಳ ಹಿಂದೆ ಕಿಡ್ನಿ ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಈಚೆಗೆ ಕೋವಿಡ್ ಗೆ ತುತ್ತಾಗಿ ಗುಣಮುಖರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸೃಜನಾತ್ಮಕ ರಂಗ ನಿರ್ದೇಶಕ, ಕಥೆಗಾರ, ಲೇಖಕ, ಸಹೃದಯಿ ಕವಿ, ನಟ, ನಿರ್ದೇಶಕ, ಮೋಡಿ ಮಾಡುವ ಮಾತುಗಾರ, ಅರ್ಥಶಾಸ್ತ್ರ ಉಪನ್ಯಾಸಕರಾಗಿ ಪ್ರಸಿದ್ಧರಾದ ಪ್ರೊ. ಮಾಧವ ಆಚಾರ್ಯ 1941ರಲ್ಲಿ ಬ್ರಹ್ಮಾವರ ಸಮೀಪದ ಉಪ್ಪೂರಿನಲ್ಲಿ ಜನಿಸಿದ್ದರು. ಅವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿದ್ದು, ಸಂಸ್ಕೃತದಲ್ಲಿ ‘ರಾಸವಿಲಾಸ’ ಕೃತಿ ರಚಿಸಿದ್ದರು. ತಾಯಿ ಯು. ಲಲಿತಾಲಕ್ಷ್ಮೀ ಕುಶಲಕಲೆಗಳಲ್ಲಿ ಪರಿಣಿತರು. ಮಗನ ಕಲಾಬದುಕಿಗೆ ಅಚ್ಚಳಿಯದ ಪ್ರಭಾವ ಬೀರಿದವರು. ಯಕ್ಷಗಾನ, ಕೋಲ, ನಾಗಮಂಡಲ, ಢಕ್ಕೆಬಲಿ ಮುಂತಾದ ಆರಾಧ್ಯ ಕಲೆಗಳಿಂದ ಸಾಂಸ್ಕೃತಿಕ ಆಸಕ್ತಿ ಬೆಳೆಸಿಕೊಂಡಿದ್ದರು.

ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಕುಂದಾಪುರ ಭಂಡಾರ್ಕಾರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸುಮಾರು 32 ವರ್ಷ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ಬಳಿಕ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅಲ್ಪಕಾಲ ಸೇವೆ ಸಲ್ಲಿಸಿದ್ದರು.

ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆ

ಅಧ್ಯಾಪನ ವೃತ್ತಿಗೆ ವಿದಾಯ ಹೇಳಿದ್ದರೂ ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಆಚಾರ್ಯರು ತೊಡಗಿಕೊಂಡಿದ್ದರು. ಅನಾರೋಗ್ಯಪೀಡಿತರಾಗಿದ್ದರೂ ಸ್ವತಃ ಕಾರು ಚಾಲನೆ ಮಾಡುವ ಮೂಲಕ ಯುವಕರನ್ನೂ ನಾಚಿಸುವ ಆತ್ಮಸ್ಥೈರ್ಯ ಹೊಂದಿದ್ದರು. ತನ್ನ ಮೆಚ್ಚಿನ ಕಥೆ, ಕವನ, ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜೀವನೋತ್ಸಾಹ ಹೊಂದಿದ್ದರು. ವಿನಾ ದೈನ್ಯೇನ ಜೀವನಂ ಅನಾಯಾಸೇನ ಮರಣಂ ತನ್ನದಾಗಬೇಕು ಎಂದು ಸದಾ ಆಶಿಸುತ್ತಿದ್ದ ಪ್ರೊ. ಆಚಾರ್ಯ ಅದೇ ರೀತಿ ಕೊನೆಯುಸಿರೆಳೆದರು.
ಈ ಹಿಂದೆ ತಮ್ಮದೇ ಆದ ವ್ಯಾಸ ಪ್ರಕಾಶನದ ಮೂಲಕ ಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದ್ದ ಅವರು, `ಬೆಳಕಿನೆಡೆಗೆ‘, `ಬಾಗಿದ ಮರ‘ `ಭಾಗದೊಡ್ಡಮ್ಮನ ಕಥೆ‘, `ಸೀಳು ಬಿದಿರಿನ ಸಿಳ್ಳು‘ ಮೊದಲಾದ 10 ಕಥಾ ಸಂಕಲನ ಬರೆದ ಅವರ `ಬಾಗಿದ ಮರ’ಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿತ್ತು. `ಭಾಗದೊಡ್ಡಮ್ಮನ ಕಥೆ’ ಮಂಗಳೂರು ವಿ.ವಿ. ಪಠ್ಯವಾಗಿತ್ತು.

ಜೊತೆಗೆ ರಂಗಪ್ರಬಂಧಗಳು, ನೃತ್ಯ ಪ್ರಬಂಧಗಳು, ಯಕ್ಷ ಪ್ರಬಂಧಗಳು, ಸಾಹಿತ್ಯ ಸ್ಪಂದನ, ಲಘು ಬಿಗು ಪ್ರಬಂಧಗಳನ್ನು ಬರೆದಿದ್ದಾರೆ.
ಅವರ `ರಂಗಸ್ಥಳದ ಕನವರಿಕೆಗಳು`ಹೂ ಮಿಡಿ ಹಾಡು‘ ರಂಗ ಪ್ರಬಂಧಗಳು. `ಇದ್ದಕ್ಕಿದ್ದಂತೆ ನಾಟಕ’ `ಎದೆಯೊಳಗಣ ದೀಪ‘, `ಗೋಡೆ‘, `ಕೃಷ್ಣನ ಸೋಲು‘, `ರಾಣಿ ಅಬ್ಬಕ್ಕ ದೇವಿ‘, `ಗಾಂಧಾರಿ‘, `ರಾಧೆ ಎಂಬ ಗಾಥೆ‘ ಮತ್ತು `ನೆನಪೆಂಬ ನವಿಲುಗರಿ‘ ನಾಟಕಗಳು.

`ಅಂಧಯುಗ‘, `ಬ್ರಹ್ಮಕಪಾಲ’ `ಅರುಂಧತಿ‘, `ಹಂಸ ದಮಯಂತಿ’ `ಶಬರಿ‘ `ಅಶ್ವತ್ಥಾಮನ್‘, `ಹೆಬ್ಬೆರಳು‘, `ಸತ್ಯಾಯನ ಹರಿಶ್ಚಂದ್ರ‘, `ಅಹಲ್ಯೆ‘, `ಶ್ರೀಹರಿಚರಿತೆ‘, `ಹರಿಣಾಭಿಸರಣ’, `ಕುಚೇಲ ಕೃಷ್ಣ‘, `ಸೀತಾಪಹರಣ’, `ಚಿತ್ರಾಂಗದೆ‘, `ವೃಂದಾವನ‘, `ಹರಿದಾಸ ವಿಜಯ‘, `ಅವತಾರ ವೈಭವ‘ `ಶ್ರೀ ಮನೋಹರ ಬಿಲ್ಲಹಬ್ಬ‘, `ಆನಂದ ಮುಕುಂದ‘, `ಭಗವದ್ಗೀತಾ ನೃತ್ಯ ವೈಭವ‘, `ನವನೀತ ಲಹರಿ‘, `ಸಾಕ್ಷಾತ್ಕಾರ’, `ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೆ‘ `ಅರಗಿನ ಬೆಟ್ಟ‘, `ಋತುಗೀತೆ‘, `ಮುಕ್ತದ್ವಾರ‘, `ಶ್ವಮೇಧ‘, `ಮಾದ್ರಿಯ ಚಿತೆ‘, `ಹೊನ್ನಿಯ ಮದುವೆ‘, `ಹಿಡಿಂಬೆ‘, `ಮಹಾಯೋಗಿ‘, `ಮತ್ತೆ ರಾಮನ ಕತೆ‘, `ರುಕ್ಮಿಣೀಶ ವಿಜಯ‘, `ನಾರದ ಕೊರವಂಜಿ‘, `ಕೀಚಕ ವಧೆ ರೂಪಕ‘ `ಉಪನಿಷದುದ್ಯಾನಂ‘, `ವಲ್ಮೀಕ ನಿನಾದ’, `ತಿರುನೀಲಕಂಠ’, `ನೆನಪಾದಳು ಶಕುಂತಲೆ, `ಕುವರ ಭಸ್ಮಾಸುರ‘, `ಪಾಂಚಾಲಿ’, `ಭೀಷ್ಮ ಸತ್ಯವ್ರತನಾದದ್ದು’ `ಅಂಬೆ‘ ಮತ್ತು `ಜ್ವಾಲೆ‘ ಅವರ ನೃತ್ಯರೂಪಕಗಳು.

ಸಮೂಹ ದ ಶಕ್ತಿ

`ಸಮೂಹ’ ಪರಿಕಲ್ಪನೆಯಲ್ಲಿ ಸುಮಾರು 50ರ ದಶಕದಿಂದ ಅವರು ಸಂಯೋಜಿಸಿ, ನಿರ್ದೇಶಿಸಿ, ನಿರ್ಮಿಸಿದ ರಂಗಪ್ರಯೋಗಗಳು, ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಂದಿಗೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಹಿರಿಮೆ ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರದು. ಸೃಜನಾತ್ಮಕ ರಂಗ ನಿರ್ದೇಶಶಕರಾದ ಅವರ `ಶಬರಿ’ ನೃತ್ಯ ರೂಪಕ ಭಾರೀ ಪ್ರಸಿದ್ಧಿ ಪಡೆದಿತ್ತು. `ಸಮೂಹ’ ಸಂಸ್ಥೆ ಮೂಲಕ ನೂರಾರು ಕಲಾವಿದರನ್ನು ಬೆಳೆಸಿದ ಹಿರಿಮೆ ಆಚಾರ್ಯರದ್ದು. ಚಂದ್ರಶೇಖರ ಕೆದ್ಲಾಯ, ಗುರುರಾಜ ಮಾರ್ಪಳ್ಳಿ ಮೊದಲಾದ ಪ್ರಸಿದ್ಧ ಸಂಗೀತ ನಿರ್ದೇಶಕರು ಅವರ ಗರಡಿಯಲ್ಲಿ ಬೆಳೆದವರು. ಪುತ್ರಿ, ಭರತನಾಟ್ಯ ಕಲಾವಿದೆ ಭ್ರಮರಿ ಶಿವಪ್ರಕಾಶ್ ತಂದೆಯ ಹಾದಿಯಲ್ಲಿ ಸಾಗಿದ್ದು, ನೃತ್ಯ ರೂಪಕಗಳ ಪ್ರಯೋಗದಲ್ಲಿ ನಿರತರಾಗಿದ್ದಾರೆ.

ಶಬರಿಯನ್ನು ವಿನೂತನವಾಗಿ ಚಿತ್ರಿಸಿದ್ದ ಅವರು, ಕಾಡು ನಾಡುಗಳ ನಡುವೆ ಶಬರಿಗಾಯಿತು ರಾಮ ದರುಶನ… ಎಂಬಂಂತೆ ಚಿತ್ರಿಸಿದ್ದರು. ಅದಮಾರು ಮಠ ಪರ್ಯಾಯ ಸಂದರ್ಭದಲ್ಲಿ ಈ ನೃತ್ಯರೂಪಕ ಪ್ರದರ್ಶನಗೊಂಡಿದ್ದು, 2019ರ ಡಿ. 3ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರದರ್ಶನ ಕಂಡಿತ್ತು.

ಕರಡು ಪ್ರತಿಯಲ್ಲಿ ಕಾದಂಬರಿ

ಯಕ್ಷಗಾನ ಕಲಾವಿದರೋರ್ವರ ಬದುಕನ್ನು ಆಧರಿಸಿ `ಜಯಶೀಲಯ್ಯನ ಯಶೋಗಾಥೆ‘ ಕಾದಂಬರಿ ರಚನೆಯಲ್ಲಿ ತೊಡಗಿದ್ದರು. ಅದಿನ್ನೂ ಕರಡು ರೂಪದಲ್ಲಿದೆ. ಈಚೆಗೆ `ಕರ್ಮವೀರ’ ಸಾಪ್ತಾಹಿಕದಲ್ಲಿ
ದರ್ಭೆಯ ಎರಡು ಕಟ್ಟುಗಳು ಕಥೆ  ಪ್ರಕಟವಾಗಿತ್ತು. ಈಚೆಗೆ ನಿಧನರಾದ ಯಕ್ಷಗಾನ ಕಲಾವಿದರಾದ ವಾಸುದೇವ ಸಾಮಗ ಮತ್ತು ಹಡಿನಬಾಳ ಬಗೆಗಿನ ನುಡಿನಮನ ಇನ್ನೂ ಅಕ್ಷರ ರೂಪದಲ್ಲಿದೆ.

ವಿಶೇಷ ಸಾಧನೆಗಳು

ಮಂಗಳೂರು ಆಕಾಶವಾಣಿ ಕಲಾವಿದರಾಗಿದ್ದ ಅವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅನೇಕ ನಾಟಕಗಳಲ್ಲಿ ಅವರು ಅಭಿನಯಿಸಿದ್ದು, ಅವುಗಳಲ್ಲಿ `ಗುಡ್ಡದ ಭೂತ‘ ಧಾರವಾಹಿಯೂ ಒಂದು.

ಗೌರವಾದರಗಳು

1997 ಕೋಟದಲ್ಲಿ ನಡೆದ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1999ರಲ್ಲಿ ಅವರ ರಂಗ ಪ್ರಯೋಗಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಯಕ್ಷಗಾನ ಅಕಾಡೆಮಿಯ ಸದಸ್ಯರೂ ಆಗಿದ್ದರು. ಉಡುಪಿ ರಂಗಭೂಮಿ `ರಂಗವಿಶಾರದ’ ಪ್ರಶಸ್ತಿ ನೀಡಿತ್ತು. ಅಲೆವೂರು ಗ್ರೂಪ್ ಅವಾರ್ಡ್ ಕೂಡಾ ಪ್ರೊ. ಆಚಾರ್ಯರಿಗೆ ನೀಡಲಾಗಿತ್ತು.

ಈ ತಿಂಗಳ 13ರಂದು ಕಾಂತಾವರ ಕನ್ನಡ ಸಂಘ ಆಶ್ರಯದ ಮೊಗಸಾಲೆ ದತ್ತಿನಿಧಿಯ `ಕಾಂತಾವರ ಲಲಿತಕಲಾ ಪ್ರಶಸ್ತಿ’ ಪ್ರಕಟಿಸಿತ್ತು. ಅಷ್ಟೇ ಅಲ್ಲದೆ ಅನೇಕ ರಂಗಭೂಮಿ, ಸಾಹಿತ್ಯಿಕ, ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಅನೇಕ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದರು. ಪ್ರಶಸ್ತಿ, ಪ್ರಶಂಸೆಗಳಿಂದ ಅಂತರ ಕಾಯ್ದುಕೊಂಡಿದ್ದರು. ರಲ್ಲಿ ಕೋಟದಲ್ಲಿ ನಡೆದ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1999ರಲ್ಲಿ ಅವರ ರಂಗ ಪ್ರಯೋಗಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಯಕ್ಷಗಾನ ಅಕಾಡೆಮಿಯ ಸದಸ್ಯರೂ ಆಗಿದ್ದರು. ಉಡುಪಿ ರಂಗಭೂಮಿ `ರಂಗವಿಶಾರದ’ ಪ್ರಶಸ್ತಿ ನೀಡಿತ್ತು. ಅಲೆವೂರು ಗ್ರೂಪ್ ಅವಾರ್ಡ್ ಕೂಡಾ ಪ್ರೊ. ಆಚಾರ್ಯರಿಗೆ ನೀಡಲಾಗಿತ್ತು.

ಈ ತಿಂಗಳ 13ರಂದು ಕಾಂತಾವರ ಕನ್ನಡ ಸಂಘ ಆಶ್ರಯದ ಮೊಗಸಾಲೆ ದತ್ತಿನಿಧಿಯ `ಕಾಂತಾವರ ಲಲಿತಕಲಾ ಪ್ರಶಸ್ತಿ’ ಪ್ರಕಟಿಸಿತ್ತು. ಅಷ್ಟೇ ಅಲ್ಲದೆ ಅನೇಕ ರಂಗಭೂಮಿ, ಸಾಹಿತ್ಯಿಕ, ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಅನೇಕ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದರು. ಪ್ರಶಸ್ತಿ, ಪ್ರಶಂಸೆಗಳಿಂದ ಅಂತರ ಕಾಯ್ದುಕೊಂಡಿದ್ದರು.

ಗಣ್ಯರ ಸಂತಾಪ

ಪ್ರೊ. ಉದ್ಯಾವರ ಮಾಧವ ಆಚಾರ್ಯ ನಿಧನಕ್ಕೆ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಉಡುಪಿ ತಾಲೂಕು ಕಸಾಪ ಅಧ್ಯಕ್ಷೆ ವಸಂತಿ ಶೆಟ್ಟಿ, ವಿಮರ್ಶಕ ಪ್ರೊ. ಹಿರಿಯಡಕ ಮುರಳೀಧರ ಉಪಾಧ್ಯ, ಡಾ| ಮಾಧವಿ ಭಂಡಾರಿ, ಕಾಂತಾವರ ಕನ್ನಡ ಸಂಘದ ಡಾ. ನಾ. ಮೊಗಸಾಲೆ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ, ಪೂರ್ಣಪ್ರಜ್ಞ ಕಾಲೇಜು ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಡಾ| ಬಿ. ಎಂ. ಸೋಮಯಾಜಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಪ್ರಾಂಶುಪಾಲ ಪ್ರೊ. ಎ. ರಾಘವೇಂದ್ರ ಮೊದಲಾದವರು ಸಂತಾಪ ಸೂಚಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!