Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಡಾ| ಜಿ. ಶಂಕರ್ ಸಾರಥ್ಯ: ಹಸೆಮಣೆಯೇರಿದ 20 ಜೋಡಿಗಳು

ಡಾ| ಜಿ. ಶಂಕರ್ ಸಾರಥ್ಯ: ಹಸೆಮಣೆಯೇರಿದ 20 ಜೋಡಿಗಳು

ಸುದ್ದಿಕಿರಣ ವರದಿ
ಗುರುವಾರ, ಮೇ 5

ಡಾ| ಜಿ. ಶಂಕರ್ ಸಾರಥ್ಯ: ಹಸೆಮಣೆಯೇರಿದ 20 ಜೋಡಿಗಳು
ಕುಂದಾಪುರ: ಉಡುಪಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ವೆನ್ಶನಲ್ ಸೆಂಟರ್ ನಲ್ಲಿ ಬುಧವಾರ ಗೋಧೂಳಿ ಸಮುಹೂರ್ತದಲ್ಲಿ ನಡೆದ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ 20 ಮಂದಿ ಸತಿ- ಪತಿಯರಾದರು.

ಹಿತ ನುಡಿದ ಜಿ. ಶಂಕರ್
ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ ನಾಡೋಜ ಡಾ| ಜಿ. ಶಂಕರ್, ವಧೂ ವರರನ್ನು ಆಶೀರ್ವದಿಸಿ ಅತ್ತೆ ಮಾವಂದಿರನ್ನು ತಂದೆ ತಾಯಿಯರಂತೆ ಪ್ರೀತಿಯಿಂದ ನೋಡಿಕೊಳ್ಳಿ, ಗಂಡ ಹಾದಿ ತಪ್ಪಿದಲ್ಲಿ ತಾಯಿಯ ಸ್ಥಾನದಲ್ಲಿ ನಿಂತು ಬುದ್ಧಿ ಹೇಳಿ ಎಂದು ವಧುವಿಗೆ ಹಿತನುಡಿದರೆ, ಕೈಹಿಡಿದ ಮಡದಿಯನ್ನು ಪ್ರೀತಿಯಿಂದ ಕಾಣಿ. ದುರ್ವಸನಗಳಿಗೆ ಬಲಿಯಾಗದೇ ಮಮತೆ ಗೌರವದಿಂದ ಮನೆಯನ್ನು ಮುನ್ನಡೆಸಿ ಎಂದು ವರರಿಗೆ ಕಿವಿಮಾತು ಹೇಳಿದರು.

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಎಲ್ಲಾ ಜೋಡಿಗಳಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.

ಶಾಲಿನಿ ಜಿ. ಶಂಕರ್ ಇದ್ದರು.

ಅಭ್ಯಾಗತರಾಗಿದ್ದ ಉದ್ಯಮಿ ಆನಂದ ಸಿ. ಕುಂದರ್ ಮಾತನಾಡಿ ಹೆಣ್ಣು, ಹುಟ್ಟಿದ ಮನೆ ಹಾಗೂ ಮದುವೆಯಾಗಿ ಹೋಗುವ ಮನೆಯ ಸಂಪರ್ಕ ಕೊಂಡಿಯಾಗಿ ಮನೆ- ಮನ ಬೆಳಗುತ್ತಾಳೆ. ನೂತನ ದಂಪತಿಗಳು ಒಬ್ಬರನ್ನೊಬ್ಬರು ಅರಿತುಕೊಂಡು ಪರಸ್ಪರ ಹೊಂದಾಣಿಕೆಯಲ್ಲಿ ದಾಂಪತ್ಯ ಜೀವನ ನಡೆಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ದ.ಕ. ಮೊಗವೀರ ಮಹಾಜನ ಸೇವಾಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡಕ, ನಿಕಟಪೂರ್ವ ಅಧ್ಯಕ್ಷ ಶಿವರಾಮ ಕೆ. ಎಂ., ಪ್ರಧಾನ ಕಾರ್ಯದರ್ಶಿ ರವೀಶ್ ಕೊರವಡಿ, ಬಾರ್ಕೂರು ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್, ಬಗ್ವಾಡಿ ಮಹಿಷಮರ್ದಿನಿ ದೇವಸ್ಥಾನ ಹೋಬಳಿ ಶಾಖಾಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ನಿಕಟಪೂರ್ವ ಅಧ್ಯಕ್ಷ ಕೆ. ಕೆ. ಕಾಂಚನ್, ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ, ಹಾಲಾಡಿ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಕೃಷ್ಣಮೂರ್ತಿ ಕಾಂಚನ್, ಮೊಗವೀರ ಯುವ ಸಂಘಟನೆ ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಪದಾಧಿಕಾರಿಗಳು, ಹೋಬಳಿ ಗುರಿಕಾರರು, ಸಮಾಜದ ಹಿರಿಯರು ಉಪಸ್ಥಿತರಿದ್ದರು.

ನಾಡೋಜ ಜಿ.ಶಂಕರ್ ದಂಪತಿಗಳು ಹಾಗೂ ಇನ್ನಿತರರು ತಾಳಿ, ಕರಿಮಣಿ ಸರ ಹಸ್ತಾಂತರಿಸಿದರು.

ಪೌರೋಹಿತ್ಯ ನಡೆಸಿದ ಉಡುಪಿ ರಥಬೀದಿ ಅನಂತೇಶ್ವರ ದೇವಳ ಅರ್ಚಕ ವೇದವ್ಯಾಸ  ಐತಾಳ ಅವರನ್ನು ಆನಂದ ಸಿ. ಕುಂದರ್ ಹಾಗೂ ನಾಡೋಜ ಡಾ| ಜಿ. ಶಂಕರ್ ಗೌರವಿಸಿದರು.

ವರದಕ್ಷಿಣೆ ರಹಿತ ಮತ್ತು ಸರಳ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಧುವಿಗೆ ಕಾಲುಂಗುರ, ಸೀರೆ, ರವಿಕೆ ಕಣ, ವರನಿಗೆ ಕುರ್ತಾ, ಫೈಜಾಮ ಉಡುಗೊರೆಯಾಗಿ ನೀಡಲಾಗಿತ್ತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!