Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಮಳೆಹಾನಿ ಮೂಲ ಸೌಕರ್ಯಕ್ಕಾಗಿ 500 ಕೋಟಿ ಬಿಡುಗಡೆ

ಮಳೆಹಾನಿ ಮೂಲ ಸೌಕರ್ಯಕ್ಕಾಗಿ 500 ಕೋಟಿ ಬಿಡುಗಡೆ

ಸುದ್ದಿಕಿರಣ ವರದಿ
ಬುಧವಾರ, ಜುಲೈ 13

ಮಳೆಹಾನಿ ಮೂಲ ಸೌಕರ್ಯಕ್ಕಾಗಿ 500 ಕೋಟಿ ಬಿಡುಗಡೆ
ಉಡುಪಿ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಸಣ್ಣ ಸೇತುವೆಗಳ ಪುನರ್ ನಿರ್ಮಾಣ ಸೇರಿದಂತೆ ತುರ್ತು ಕೆಲಸಗಳಿಗಾಗಿ ತಕ್ಷಣ 500 ಕೋ. ರೂ. ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಬುಧವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಮತ್ತು ಮಳೆಯಿಂದ ಉಂಟಾದ ಹಾನಿ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

32 ಜೀವ ಹಾನಿ
ಮಳೆಯಿಂದಾಗಿ ಬಹಳಷ್ಟು ರಸ್ತೆಗಳು ಹದಗೆಟ್ಟಿವೆ. ಮೂಲಸೌಕರ್ಯಗಳು ಹಾಳಾಗಿವೆ. ಹಾಗಾಗಿ ತಕ್ಷಣ ಮೂಲಸೌಕರ್ಯಗಳ ಮರುಸ್ಥಾಪನೆಗಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ವರ್ಷ ಜುಲೈ ತಿಂಗಳಲ್ಲಿ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿ, ಪ್ರವಾಹ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ 34 ಗ್ರಾಮಗಳು ಜಲಾವೃತವಾಗಿದ್ದು, ಇದುವರೆಗೆ 300ಕ್ಕಿಂತ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 32 ಜೀವ ಹಾನಿಯಾಗಿದ್ದು, 5 ಮಂದಿ ನಾಪತ್ತೆಯಾಗಿದ್ದಾರೆ.

ಮಳೆಯಾಗಿರುವ ಜಿಲ್ಲೆಗಳಲ್ಲಿ 14 ಕಾಳಜಿ ಕೇಂದ್ರ ತೆರೆಯಲಾಗಿದೆ. 4 ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳು ಕೆಲಸ ಮಾಡುತ್ತಿವೆ ಎಂದರು.

355 ಹೆಕ್ಟೇರ್ ಬೆಳೆ ನಷ್ಟ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಕೃಷಿ ಮತ್ತು ತೋಟಗಾರಿಕೆಯ 355 ಹೇಕ್ಟರ್ ಪ್ರದೇಶದ ಬೆಳೆ ಹಾನಿಯಾಗಿದೆ. 1,062 ಮನೆಗಳಿಗೆ ಹಾನಿಯಾಗಿದೆ.

ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ 2,187 ಕಿ.ಮೀ ರಸ್ತೆ ಹಾನಿಗೊಳಗಾಗಿದೆ. 168 ಸೇತುವೆಗಳಿಗೆ ಧಕ್ಕೆಯಾಗಿದೆ. 5,595 ಕಿ.ಮೀ.ನಷ್ಟು ವಿದ್ಯುತ್ ತಂತಿ ಹಾಳಾಗಿದ್ದು, 422 ಟ್ರಾನ್ಸ್ಫಾರ್ಮರ್ ಗಳು ಕೆಟ್ಟಿವೆ ಎಂದು ಮಾಹಿತಿ ನೀಡಿದರು.

ಪ್ರವಾಹದಿಂದ ಹಾನಿಗೊಳಗಾದ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಲು ಕೆಲವು ಹೊಸ ನಿಯಮಾವಳಿಗಳನ್ನು ರೂಪಿಸಿ, ಪರಿಹಾರಧನ ಹೆಚ್ಚಿಸಿ,  ನೀಡುವ ಕೆಲಸ ಆಗುತ್ತಿದೆ ಎಂದರು.

ವೇವ್ ಬ್ರೇಕರ್ ಅಳವಡಿಕೆ
ಕರಾವಳಿ ಜಿಲ್ಲೆಗಳ ಕಡಲ್ಕೊರೆತ ಸಮಸ್ಯೆಗೆ ಕೇರಳ ಮಾದರಿಯಲ್ಲಿ ಸುಮಾರು 300 ಕೋ. ರೂ. ವೆಚ್ಚದ ವೇವ್ ಬ್ರೇಕರ್ ತಂತ್ರಜ್ಞಾನ ಬಳಸಲಾಗುವುದು.

ದ.ಕ. ಜಿಲ್ಲೆಯ ಉಳ್ಳಾಲದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುವುದು. ಅದು ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಮೂರೂ ಜಿಲ್ಲೆಗಳ ಸುಮಾರು 330 ಕಿ.ಮೀ ವ್ಯಾಪ್ತಿಯಲ್ಲಿ ಅಗತ್ಯವಿರುವೆಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

ಒಟ್ಟಿನಲ್ಲಿ ಮಳೆಹಾನಿ ಮತ್ತು ಸಮುದ್ರ ಕೊರೆತ ತಡೆಗೆ ದೀರ್ಘಕಾಲಿಕ ಮತ್ತು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಆರ್. ಅಶೋಕ್, ಸಿ. ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಸ್. ಅಂಗಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ್, ಬಿ. ಎಂ. ಸುಕುಮಾರ ಶೆಟ್ಟಿ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರಾದೇಶಿಕ ಆಯುಕ್ತ ಪ್ರಕಾಶ ಜಿ. ಎಸ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಗದೀಶ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!