Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ 8 ಲಕ್ಷ ಕೋವಿಡ್ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಗುರಿ

8 ಲಕ್ಷ ಕೋವಿಡ್ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಗುರಿ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 18

8 ಲಕ್ಷ ಕೋವಿಡ್ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಗುರಿ
ಉಡುಪಿ: ಜಿಲ್ಲೆಯಲ್ಲಿ ಸಂಭಾವ್ಯ ಕೋವಿಡ್ 4ನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ 18ರಿಂದ 59 ವರ್ಷದೊಳಗಿನ ಸಾರ್ವಜನಿಕರಿಗೆ ಸೆಪ್ಟಂಬರ್ 30ರೊಳಗೆ 8 ಲಕ್ಷ ಕೋವಿಡ್ 19 ಮುಂಜಾಗ್ರತೆ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ಸೋಮವಾರ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಉಚಿತ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಮತ್ತು 2ನೇ ಡೋಸ್ ಲಸಿಕೆ ನೀಡುವಲ್ಲಿ 100 ಶೇ. ಸಾಧನೆ ಆಗಿದ್ದು, ಪ್ರಸ್ತುತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ. ಎರಡನೇ ಡೋಸ್ ಪಡೆದು 6 ತಿಂಗಳು ದಾಟಿದವರು ತಮ್ಮ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು ಎಂದರು.

ಸಾರ್ವಜನಿಕರು ಪ್ರಥಮ ಮತ್ತು 2ನೇ ಡೋಸ್ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದ ಕಾರಣ ಕೋವಿಡ್ 3ನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಕರಣ ಕಂಡುಬಂದಿರಲಿಲ್ಲ. ಕೋವಿಡ್ ಲಸಿಕೆ ನೀಡಿಕೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ವಿವಿಧ ಸಂಘಸಂಸ್ಥೆಗಳು ಹಾಗೂ ನಾಗರಿಕರು ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಿದ್ದು, ಮುನ್ನೆಚ್ಚರಿಕೆ ಡೋಸ್ ನೀಡಿಕೆಯಲ್ಲೂ ಶೇ. 100 ಪ್ರಗತಿ ಸಾಧಿಸುವಲ್ಲಿ ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಸಾರ್ವಜನಿಕರಿಗೆ ಲಸಿಕೆ ನೀಡಲಾಯಿತು.

ಜಿಲ್ಲಾ ಕೋವಿಡ್ ಲಸಿಕೆ ಉಸ್ತುವಾರಿ ಡಾ. ಎಂ. ಜಿ. ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ. ಕೀರ್ತಿನಾಥ ಬಲ್ಲಾಳ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಇದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಸ್ವಾಗತಿಸಿ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!