Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಂತ್ರ ತಂತ್ರಗಳ ಸೂಕ್ತ ಜ್ಞಾನ ಪಡೆಯಲು ಅರ್ಚಕರಿಗೆ ಸಲಹೆ

ಮಂತ್ರ ತಂತ್ರಗಳ ಸೂಕ್ತ ಜ್ಞಾನ ಪಡೆಯಲು ಅರ್ಚಕರಿಗೆ ಸಲಹೆ

ಉಡುಪಿ: ಭಕ್ತ ಹಾಗೂ ಭಗವಂತನ ನಡುವಿನ ಸೇತುವಿನಂತೆ ಕಾರ್ಯನಿರ್ವಹಿಸುವ ಅರ್ಚಕರು ಮಂತ್ರ ತಂತ್ರಗಳನ್ನು ಸರಿಯಾಗಿ ಅಭ್ಯಸಿಸಿ, ಅವುಗಳ ಜ್ಞಾನ ಪಡೆದುಕೊಳ್ಳಬೇಕು ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅರ್ಚಕರಿಗೆ ಸಲಹೆ ನೀಡಿದರು.

ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ಧಾರ್ಮಿಕ ಪರಿಷತ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಅರ್ಚಕರ ಸಂಘ ಸಹಯೋಗದೊಂದಿಗೆ ಕೃಷ್ಣಮಠ ರಾಜಾಂಗಣದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಅರ್ಚಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸ್ವಾರ್ಥ ಚಿಂತನೆಯನ್ನು ಬದಿಗಿಟ್ಟು ಪರಾರ್ಥ ಚಿಂತನೆ ಆಶಿಸಿ, ಸಮಷ್ಟಿಯ ಒಳಿತಿಗಾಗಿ ಭಗವಂತನಲ್ಲಿ ಪ್ರಾರ್ಥಿಸುವುದು ಅರ್ಚಕರ ಕರ್ತವ್ಯ. ಸಮಾಜದಲ್ಲಿ ಅರ್ಚಕರಿಗೆ ಗೌರವ ಭಾವನೆ ಇದೆ. ಅದನ್ನು ಅರ್ಥೈಸಿಕೊಂಡು ಮೈ- ಮನ ಶುದ್ಧಿ ಪಾಲಿಸಿ ದೇವಾಲಯದಲ್ಲೂ ಅದನ್ನು ಅಳವಡಿಸಿಕೊಳ್ಳಬೇಕು. ಭಕ್ತರಲ್ಲಿ ಬೇಧಭಾವ ಮಾಡದೆ ಸಮಾಜದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.

ಹಿಂದೂ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು.

ಅಭ್ಯಾಗತರಾಗಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಇಂದಿನ ದಿನಗಳಲ್ಲಿ ಮನೆ ಹಾಗೂ ಶಾಲೆಗಳಲ್ಲಿ ಸಂಸ್ಕಾರದ ಪಾಠ ಲಭಿಸುತ್ತಿಲ್ಲ. ಜಾತ್ಯತೀತತೆ ಹೆಸರಿನಲ್ಲಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಮೊದಲಾದವುಗಳ ಉಲ್ಲೇಖವಿಲ್ಲ. ಈ ನಿಟ್ಟಿನಲ್ಲಿ ದೇವಾಲಯಗಳು ಸಂಸ್ಕೃತಿ ಪ್ರಬೋಧಕ ಕೇಂದ್ರಗಳಾಗಬೇಕು. ಅದಕ್ಕೆ ಅರ್ಚಕರು ಕಾರಣರಾಗಬೇಕು. ಅಂಥ ಅರ್ಚಕರು ತಮ್ಮ ಮನೆಯಿಂದಲೇ ಸಂಸ್ಕೃತಿ, ಸಂಸ್ಕಾರ ಆರಂಭಿಸಬೇಕು ಎಂದರು.

ಸರಕಾರವೂ ಅರ್ಚಕರ ಅಭಿವೃದ್ಧಿಗೆ ಗಮನಹರಿಸಬೇಕು ಎಂದವರು ಆಶಿಸಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ, ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿರುವ ಅರ್ಚಕರು ವಸ್ತ್ರ ಸಂಹಿತೆ ಪಾಲಿಸಬೇಕು. ನಿತ್ಯ ಯೋಗಾಭ್ಯಾಸ ಇತ್ಯಾದಿಗಳನ್ನು ಅನುಸರಿಸುವ ಮೂಲಕ ಶರೀರವನ್ನು ಸುಸ್ಥಿತಿಯಲ್ಲಿಡಬೇಕು. ವೃತ್ತಿಗೆ ಪೂರಕವಾದ ವರ್ತನೆ ಅರ್ಚಕರದ್ದಾಗಬೇಕು. ಯುವಜನತೆ ನಮ್ಮತನ ಬೆಳೆಸಿಕೊಳ್ಳಬೇಕು ಎಂದರು.

ಮಣಿಪಾಲ ಎಂಐಟಿ ಪ್ರಾಧ್ಯಾಪಕ ಡಾ| ನಾರಾಯಣ ಶೆಣೈ, ದೇವಾಲಯಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕು. ಮಾತ್ರವಲ್ಲದೆ, ದೇವಾಲಯಗಳಿಂದ ಎಲ್ಲ ಸಮುದಾಯಗಳಿಗೆ ಸಾಮಾಜಿಕ ಸೇವೆ ಲಭಿಸುವಂತಾಗಬೇಕು ಎಂದರು.

ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಶೇಷಪ್ಪ ಇದ್ದರು.

ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಅರ್ಚಕ ಶುದ್ಧ ಆಹಾರ, ನಿಯಮಿತ ನಿದ್ರೆ, ವ್ಯಾಯಾಮ ಇತ್ಯಾದಿಗಳ ಮೂಲಕ ಶರೀರ ಕಾಪಾಡಿಕೊಳ್ಳಬೇಕು. ಸಜ್ಜನರಿಗೆ ಹಿತವಾಗುವ ಮಾತುಗಳನ್ನಾಡಬೇಕು. ಉತ್ತಮ ವಿಚಾರವುಳ್ಳವರಾಗಿರಬೇಕು. ತ್ರಿಕರಣಪೂರ್ವಕ ಕಾರ್ಯನಿರ್ವಹಿಸಿದವನಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತದೆ. ಅದುವೇ ಅರ್ಚಕನ ಆದ್ಯತೆಯಾಗಬೇಕು ಎಂದರು.

ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಅರ್ಚಕರ ಸಂಘದ ಅಧ್ಯಕ್ಷ ಮುಂಡ್ಕೂರು ರಾಮದಾಸ ಆಚಾರ್ಯ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಸಾದ ತಂತ್ರಿ, ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಇದ್ದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಹರಿಪ್ರಸಾದ ಭಟ್ ಹೆರ್ಗ ಸ್ವಾಗತಿಸಿ, ನಿರೂಪಿಸಿದರು. ಸುನಿಲ್ ಕೆ. ಆರ್. ವಂದಿಸಿದರು. ಭಾರತೀಶ ಬಲ್ಲಾಳ್ ವೇದಘೋಷ ಮಾಡಿದರು. ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀರಾಮ ಭಟ್ ಸಾಣೂರು, ರಮಾಕಾಂತ ದೇವಾಡಿಗ ಪಡುಬಿದ್ರಿ, ಮೋಹನ ಉಪಾಧ್ಯ ಕಡಿಯಾಳಿ, ಶಾಲಿನಿ ಸುರೇಶ ಗಾಣಿಗ ಸಾಲಿಗ್ರಾಮ, ವಾಸುದೇವ ಹಂಗಾರಕಟ್ಟೆ ಇದ್ದರು.

ಬಳಿಕ ಮಣಿಪಾಲ ಮುನಿಯಾಲು ಆಯುರ್ವೇದ ಕಾಲೇಜು ಉಪಪ್ರಾಚಾರ್ಯ ಡಾ. ಡಿ. ಗುರುರಾಜ ತಂತ್ರಿ ಆರೋಗ್ಯ ಮಾಹಿತಿ ನೀಡಿದರು. ದೇವಸ್ಥಾನದ ದೈನಂದಿನ ಆಚರಣೆ ಹಾಗೂ ಅರ್ಚಕರ ಕರ್ತವ್ಯಗಳು ಕುರಿತು ಆಗಮತಜ್ಞ ದೇವಿಪ್ರಸಾದ್ ತಂತ್ರಿ ಸೂರಾಲು ಹಾಗೂ ದೇವಸ್ಥಾನದ ಪ್ರಾಯಶ್ಚಿತ್ತಗಳು ಕುರಿತು ವಾಸ್ತು ಹಾಗೂ ಆಗಮತಜ್ಞ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಉಪನ್ಯಾಸ ನೀಡಿದರು.

ಮುನಿಯಾಲು ಆಯುರ್ವೇದ ಕಾಲೇಜು ವತಿಯಿಂದ ಕೋವಿಡ್ ನಿಯಮಾನುಸಾರ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!