Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗರನ್ನು ನೇಮಿಸಿ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗರನ್ನು ನೇಮಿಸಿ

ಉಡುಪಿ: ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಹುತೇಕ ಹೊರರಾಜ್ಯದ ಸಿಬಂದಿಗಳೇ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದಾಗಿ ಸ್ಥಳೀಯರಿಗೆ ಭಾಷಾ ಸಮಸ್ಯೆಯಿಂದ ಬ್ಯಾಂಕಿನ ಕೆಲಸ ಕಾರ್ಯಗಳಲ್ಲಿ ತೊಂದರೆಯಾಗುತ್ತಿದೆ, ಬ್ಯಾಂಕ್ ಸೇವೆಗಳಲ್ಲಿ ಸ್ಥಳೀಯರಿಗೆ ನೆರವಾಗುವಂತೆ ಕನಿಷ್ಟ ಪ್ರಮಾಣದಲ್ಲಿಯಾದರೂ ಕನ್ನಡಿಗರನ್ನು ನೇಮಿಸುವಂತೆ ಗುರುವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಆಗ್ರಹಿಸಿತು.
ಜಿ. ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಬಾಬು ಶೆಟ್ಟಿ ವಿಷಯ ಪ್ರಸ್ತಾಪಿಸಿದರು.

ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದು ಆಂಧ್ರಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶದವರೇ ಆಯ್ಕೆಯಾಗುತ್ತಿದ್ದಾರೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ತಿಳಿಸಿದರು.

ಬ್ಯಾಂಕುಗಳಲ್ಲಿ ಶಿಕ್ಷಣ ಸಾಲ ಮತ್ತು ಮುದ್ರಾ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕೂಡಲೇ ಮಂಜೂರು ಮಾಡಿ, ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಂತೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ ಹೇಳಿದರು. ಸಣ್ಣ ಪುಟ್ಟ ಕಾರಣಗಳಿಗೆ ಅರ್ಜಿ ತಿರಸ್ಕರಿಸಬೇಡಿ ಎಂದರು.

ಕಾಡುಪ್ರಾಣಿಗಳ ಹಾವಳಿ ಬಗ್ಗೆ ಪ್ರಸ್ತಾಪಿಸಿದ ಜ್ಯೋತಿ ಹರೀಶ್, ಈ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸದಸ್ಯ ಜನಾರ್ದನ ತೋನ್ಸೆ ಅದಕ್ಕೆ ದನಿಗೂಡಿಸಿದರು.

ಪಡುಬಿದ್ರೆ ಎಂಡ್ ಪಾಯಿಂಟ್ ನಲ್ಲಿ ಬ್ಲ್ಯೂಫ್ಲಾಗ್ ಯೋಜನೆಯಿಂದ ಸ್ಥಳೀಯರು ಮತ್ತು ಮೀನುಗಾರರಿಗೆ ದೈನಂದಿನ ಚಟುವಟಿಕೆಗೆ ತೊಂದರೆಯಾಗದಂತೆ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಬೀಚ್ ನಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸುವಂತೆ ಸದಸ್ಯ ಶಶಿಕಾಂತ್ ಪಡುಬಿದ್ರೆ ವಿನಂತಿಸಿದರು.

ಸುಜ್ಲಾನ್ ಕಂಪೆನಿ ತನಗೆ ನೀಡಿದ್ದ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದು, ಅಂಥ ಜಾಗ ನೋಂದಣಿ ಮಾಡದಂತೆ ಸಂಬಂಧಪಟ್ಟವರಿಗೆ ಸೂಚಿಸುವಂತೆ ಹಾಗೂ ಕಂಪೆನಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವಂತೆ ಶಶಿಕಾಂತ ಪಡುಬಿದ್ರೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಪಡೆಯುತ್ತಿದ್ದಾರೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು ಆತಂಕಪಡುತ್ತಿದ್ದು, ಅದರಿಂದ ಲಸಿಕೆ ನೀಡಿಕೆಯ ನಿಗದಿತ ಗುರಿ ಸಾಧನೆ ಆಗುತ್ತಿಲ್ಲ ಎಂದು ಸದಸ್ಯ ಸುಮಿತ್ ಶೆಟ್ಟಿ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಲಸಿಕೆ ಪಡೆಯುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅರಿವು ಮೂಡಿಸಲು ಜಿ. ಪಂ. ಸಿಇಓ ಡಾ. ನವೀನ್ ಭಟ್ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 22,103 ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದ್ದು, ಇದುವರೆಗೆ 9,299 ಮಂದಿಗೆ ಲಸಿಕೆ ನೀಡಿ, ಶೇ. 60.2 ಗುರಿ ಸಾಧಿಸಲಾಗಿದೆ ಎಂದು ಡಿ.ಎಚ್.ಓ. ಡಾ. ಸುಧೀರಚಂದ್ರ ಸೂಡ ತಿಳಿಸಿದರು.

ಜಿಲ್ಲೆಯ ರೈತರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕುರಿತಂತೆ ಸಾಕಷ್ಟು ಮುಂಚಿತವಾಗಿ ಪ್ರಚಾರ ನೀಡಿ ಖರೀದಿಸುವಂತೆ ಹಾಗೂ ಭತ್ತ ಖರೀದಿಯಲ್ಲಿ ಎಂಓ 4 ತಳಿಯನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರುವಂತೆ ಉದಯ ಎಸ್. ಕೋಟ್ಯಾನ್ ಆಗ್ರಹಿಸಿದರು.

ಕಲ್ಯಾಣಪುರ ವ್ಯಾಪ್ತಿಯಲ್ಲಿ ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ ಶೀಘ್ರ ಪರಿಹಾರ ವಿತರಿಸುವಂತೆ ಹಾಗೂ ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಿಸುವ ಯೋಜನೆಯಲ್ಲಿ ಜನ್ಮ ದಿನಾಂಕ ಪರಿಗಣಿಸುವಾಗ ವ್ಯತ್ಯಾಸವಾಗದಂತೆ ಎಚ್ಚರಿಕೆ ವಹಿಸುವಂತೆ ಜನಾರ್ದನ ತೋನ್ಸೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಹೊಸತಾಗಿ ರಚನೆಯಾಗಿರುವ ತಾಲೂಕುಗಳಲ್ಲಿ ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ನೂತನ ತಾಲೂಕುಗಳಿಗೆ ಹೊಸ ಲಾಗಿನ್ ರಚನೆಯಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸುವಂತೆ ಸದಸ್ಯೆ ಶಿಲ್ಪಾ ಸುವರ್ಣ ಆಗ್ರಹಿಸಿದರು.

ಜಿ. ಪಂ. ಯೋಜನಾ ನಿರ್ದೇಶಕ ಉತ್ತರಿಸಿ, 20 ದಿನದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದರು.

ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!