Monday, August 15, 2022
Home ಲೋಕಾಭಿರಾಮ ಆರೋಗ್ಯ ಮಣಿಪಾಲ ಕೆಎಂಸಿಯಲ್ಲಿ ಮಕ್ಕಳ ಅಸ್ಥಿಮಜ್ಜೆ ಕಸಿ ಯಶಸ್ವಿ ಚಿಕಿತ್ಸೆ

ಮಣಿಪಾಲ ಕೆಎಂಸಿಯಲ್ಲಿ ಮಕ್ಕಳ ಅಸ್ಥಿಮಜ್ಜೆ ಕಸಿ ಯಶಸ್ವಿ ಚಿಕಿತ್ಸೆ

ಸುದ್ದಿಕಿರಣ ವರದಿ
ಗುರುವಾರ, ಆಗಸ್ಟ್ 4

ಮಣಿಪಾಲ ಕೆಎಂಸಿಯಲ್ಲಿ ಮಕ್ಕಳ ಅಸ್ಥಿಮಜ್ಜೆ ಕಸಿ ಯಶಸ್ವಿ ಚಿಕಿತ್ಸೆ
ಉಡುಪಿ: ಮಣಿಪಾಲ ಕಸ್ತೂರಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ ಮಕ್ಕಳ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಇಂಥ ಸಂಕೀರ್ಣ ವೈದ್ಯಕೀಯ ಚಿಕಿತ್ಸೆ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮೊದಲಾದೆಡೆಗಳಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಇದೀಗ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಈ ವಿಶಿಷ್ಟ ಸೇವೆ ಪ್ರಾರಂಭಿಸಿದೆ.

ಸ್ವಲ್ಪ ವೆಚ್ಚದಾಯಕವಾದ ಈ ಚಿಕಿತ್ಸೆಯನ್ನು ದಾನಿಗಳು ಹಾಗೂ ಆಸ್ಪತ್ರೆ ಸಿಎಸ್.ಆರ್ ನಿಧಿ ಮೂಲಕ ರೋಗಿಗಳ ಪಾಲಕರಿಗೆ ಹೆಚ್ಚಿನ ಹೊರೆಯಾಗದಂತೆ ನಡೆಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಅವರು ಮಕ್ಕಳ ಅಸ್ಥಿಮಜ್ಜೆ ಕಸಿ ಕ್ಲಿನಿಕ್ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ತಿಳಿಸಿದರು.

ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮಕ್ಕಳ ಅಸ್ಥಿಮಜ್ಜೆ ಕಸಿ ತಜ್ಞ ಡಾ. ವಿನಯ್ ಎಂ. ವಿ., ಮಕ್ಕಳಲ್ಲಿ ಅಸ್ಥಿಮಜ್ಜೆ ಕಸಿ ಪ್ರಕ್ರಿಯೆ ಕುರಿತು ವಿವಿರಿಸಿದರು.

ಸಹ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ., ಮೂಳೆ ಮಜ್ಜೆ ಕಸಿ ಮಾಡುವಿಕೆ ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳ ಜೀವನವನ್ನೇ ಬದಲಾಯಿಸಿದೆ. ಇದುವರೆಗೆ 10 ಮಂದಿ ಮಕ್ಕಳ ಯಶಸಸ್ವಿ ಚಿಕಿತ್ಸೆ ಮಾಡಲಾಗಿದೆ ಎಂದರು.

ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ.ವಿ., ರೋಗಿಗಳಿಗೆ ಆರ್ಥಿಕ ನೆರವು, ಪೂರಕ ಪೌಷ್ಟಿಕಾಂಶ ಮತ್ತು ವಸತಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಸಂಯೋಜಕ ಡಾ. ನವೀನ್ ಸಾಲಿನ್ಸ್, ಮಾರುಕಟ್ಟೆ ವಿಭಾಗದ ಕೃಷ್ಣಪ್ರಸಾದ್, ಮೋಹನ ಶೆಟ್ಟಿ ಮೊದಲಾದವರಿದ್ದರು.

ಇದೇ ಸಂದರ್ಭದಲ್ಲಿ ಕ್ಯಾನ್ಸರ್ ನಿಂದ ಗುಣಮುಖರಾದ ಮಕ್ಕಳಾದ ಪ್ರಣಮ್ ಮತ್ತು ನಿರೂಪ್ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಿಸಿದರು.

ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಮಣಿಪಾಲ ಆರೋಗ್ಯ ಕಾರ್ಡ್ ವಿತರಿಸಲಾಗಿದ್ದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು ಹಾಗೂ ಕಾರ್ಯದರ್ಶಿ ನಝೀರ್ ಪೊಲ್ಯ ಅವರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!