ಸುದ್ದಿಕಿರಣ ವರದಿ
ಶನಿವಾರ, ಜೂನ್ 11
ಮೆದುಳಿನ ಗಡ್ಡೆ ಜಾಗೃತಿ ಶಿಕ್ಷಣ ಕಾರ್ಯಕ್ರಮ
ಮಣಿಪಾಲ: ಇಲ್ಲಿನ ಕೆಎಂಸಿ ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಾ ವಿಭಾಗ ಆಶ್ರಯದಲ್ಲಿ ಮೆದುಳಿನ ಗೆಡ್ಡೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ವಿಶ್ವ ಮೆದುಳಿನ ಗೆಡ್ಡೆ ಜಾಗೃತಿ ದಿನ ಅಂಗವಾಗಿ ನಡೆದ ಕಾರ್ಯಕ್ರಮದ ಈ ವರ್ಷದ ಘೋಷವಾಕ್ಯ ಒಟ್ಟಿಗೆ ನಾವು ಬಲಶಾಲಿಗಳು ಎಂಬುದಾಗಿತ್ತು.
ಕಾರ್ಯಕ್ರಮದಲ್ಲಿ ಮೆದುಳಿನ ಗೆಡ್ಡೆಗಳ ಕಾರಣ, ಲಕ್ಷಣ ಮತ್ತು ಚಿಕಿತ್ಸೆ ಕುರಿತು ಜಾಗೃತಿಯನ್ನು ಮೂಡಿಸಲು ಮತ್ತು ಜನತೆಗೆ ಆ ಕುರಿತು ಶಿಕ್ಷಣ ನೀಡಲಾಯಿತು.
ಅಭ್ಯಾಗತರಾಗಿದ್ದ ಕೆಎಂಸಿ ಮಣಿಪಾಲ ಡೀನ್ ಡಾ. ಶರತ್ ಕುಮಾರ್ ರಾವ್, ಮೆದುಳಿನ ಗೆಡ್ಡೆಗೆ ಸಂಬಂಧಿಸಿದ ಜಾಗೃತಿ ಮತ್ತು ಮಾಹಿತಿ ಕಿಟ್ ಬಿಡುಗಡೆಗೊಳಿಸಿ, ಜನರು ಬ್ರೈನ್ ಟ್ಯೂಮರ್ ಇದೆ ಎಂದು ಗೊತ್ತಾದ ಕ್ಷಣ ತಮ್ಮ ಜೀವನದ ಅಂತ್ಯ ಎಂದು ಭಾವಿಸಿ ಭಯಭೀತರಾಗುತ್ತಾರೆ.
ಈಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ, ವಿಶೇಷವಾಗಿ ನರಶಸ್ತ್ರ ಚಿಕಿತ್ಸಾ ವಿಭಾಗದ ಚಿಕಿತ್ಸಾ ಕ್ರಮದ ಪ್ರಗತಿಯಿಂದಾಗಿ ಮೆದುಳಿನ ಗೆಡ್ಡೆಗಳಿಗೆ ನೀಡುವ ಚಿಕಿತ್ಸಾ ಕ್ರಮದಲ್ಲಿ ಮಹತ್ತರ ಬದಲಾವಣೆಯಾಗಿದೆ. ರೋಗದ ಆರಂಭಿಕ ಪತ್ತೆ, ರೋಗ ನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆ ಮೂಲಕ ಮೆದುಳಿನ ಗೆಡ್ಡೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.
ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ಮಾತ್ರವಲ್ಲದೆ, ವಿವಿಧ ರೋಗಗಳು ಮತ್ತು ಮಾರಣಾಂತಿಕ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮತ್ತು ಜಾಗೃತಿ ಶಿಕ್ಷಣ ನೀಡಲಾಗುತ್ತಿದೆ ಎಂದರು.
ನರಶಸ್ತ್ರ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಗಿರೀಶ್ ಮೆನನ್, ವಿಶ್ವದ ಶ್ರೇಣೀಕೃತ ಕಾಯಿಲೆಗಳಲ್ಲಿ ಬ್ರೈನ್ ಟ್ಯೂಮರ್ ಪ್ರಮುಖವಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕಳೆದ 10 ವರ್ಷದಲ್ಲಿ ಸುಮಾರು 1,700 ಬ್ರೈನ್ ಟ್ಯೂಮರ್ ಪ್ರಕರಣಗಳ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.
ನರಶಸ್ತ್ರ ಚಿಕಿತ್ಸಾ ವಿಭಾಗ ಪ್ರಾಧ್ಯಾಪಕ ಡಾ. ರಾಘವೇಂದ್ರ ನಾಯಕ್ ಸ್ವಾಗತಿಸಿ, ವಂದಿಸಿದರು