Wednesday, August 10, 2022
Home ಸಮಾಚಾರ ರಾಜ್ಯ ವಾರ್ತೆ ರಾಜ್ಯದಲ್ಲಿ ಶೀಘ್ರ ಮತಾಂತರ ತಡೆ ಮಸೂದೆ ಜಾರಿ

ರಾಜ್ಯದಲ್ಲಿ ಶೀಘ್ರ ಮತಾಂತರ ತಡೆ ಮಸೂದೆ ಜಾರಿ

ರಾಜ್ಯದಲ್ಲಿ ಶೀಘ್ರ ಮತಾಂತರ ತಡೆ ಮಸೂದೆ ಜಾರಿ
(ಸುದ್ದಿಕಿರಣ ವರದಿ)

ಉಡುಪಿ: ರಾಜ್ಯದಲ್ಲಿ ಶೀಘ್ರದಲ್ಲೇ ಮತಾಂತರ ತಡೆ ಮಸೂದೆ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ತಮ್ಮ ತಮ್ಮ ಧರ್ಮಗಳನ್ನು ಅನುಸರಿಸಿಕೊಂಡು ಚೆನ್ನಾಗಿರಬೇಕು ಎನ್ನುವುದು ಸರಕಾರದ ಆಶಯ. ವಿವಿಧ ಆಮಿಷಗಳನ್ನು ಒಡ್ಡಿ ರಾಜ್ಯದ ಕೆಲವೆಡೆ ಮತಾಂತರ ಎಗ್ಗಿಲ್ಲದೇ ಸಾಗುತ್ತಿದೆ. ಈ ಬಗ್ಗೆ ಸ್ವತಃ ಶಾಸಕರೋರ್ವರು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಮತಾಂತರ ಕುಟುಂಬದೊಳಗೆ ಕಲಹ ಸೃಷ್ಟಿಸುತ್ತಿದೆ. ಆದ್ದರಿಂದ ಅದನ್ನು ತಡೆಯಲು ಮತಾಂತರ ತಡೆ ಮಸೂದೆ ಜಾರಿ ಮಾಡುವುದು ಅನಿವಾರ್ಯ ಎಂದವರು ಪ್ರತಿಪಾದಿಸಿದರು.

ನಾನೂ ಆರ್.ಎಸ್.ಎಸ್.
ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿ ಓಟ್ ಬ್ಯಾಂಕಿಗಾಗಿ ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ವೃಥಾ ಆರ್.ಎಸ್.ಎಸ್.ನ್ನು ಎಳೆದು ತರಲಾಗುತ್ತಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮಾತ್ರವಲ್ಲ ರಾಜ್ಯ ಗೃಹಸಚಿವನಾದ ನಾನು ಕೂಡಾ ಆರ್.ಎಸ್.ಎಸ್. ಈ ಸಂಘಟನೆಗೆ ಸಮಾಜ ಮತ್ತು ದೇಶದ ಒಳಿತು ಬಯಸುವ ಶಕ್ತಿ ಇದೆ. ಅದು ರಾಷ್ಟ್ರ ಕಟ್ಟುವ ಸಂಘಟನೆಯಾಗಿದ್ದು, ಆ ಸಂಘಟನೆ ಮೂಲಕ ನಾವು ಈ ಸ್ಥಾನಕ್ಕೆ ಬಂದಿರುವ ಬಗ್ಗೆ ಹೆಮ್ಮೆ ಇದೆ ಎಂದರು.

ಈಗಿರುವ ಕಾಯ್ದೆ ಸಾಕು
ಗೋಹತ್ಯೆ ತಡೆಗೆ ಈಗಿರುವ ಕಾಯ್ದೆಯೇ ಸಾಕು. ಅಕ್ರಮ ಗೋಸಾಗಾಟ, ಗೋಹತ್ಯೆ ನಡೆದಲ್ಲಿ ಅಧಿಕಾರಿಗಳಿಗೆ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.

ಇಂಟೆಲಿಜೆನ್ಸ್ ಬಲವರ್ಧನೆ ಅಗತ್ಯವಿದ್ದು ವಿದೇಶದಲ್ಲಿ ಕುಳಿತು ಭಯೋತ್ಪಾದನೆ, ಅರಾಜಕತೆ ಸೃಷ್ಟಿಯ ಷಡ್ಯಂತ್ರ ಪತ್ತೆ, ಸ್ಯಾಟಲೈಟ್ ಫೋನ್ ಬಳಕೆ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಗುಪ್ತಚರ ಇಲಾಖೆ ಜೊತೆ ನಿಕಟ ಸಂಪರ್ಕದಲ್ಲಿದ್ದು, ಪರಸ್ಪರ ಮಾಹಿತಿ ವಿನಿಮಯಕ್ಕೂ ಮುಂದಾಗಿದ್ದೇವೆ ಎಂದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!