ಮುಂಬಯಿ: ಚಿಟಾ ಜೀತ್ ಕುನೆ ದೊ ಗ್ಲೋಬಲ್ ಸ್ಪೋರ್ಟ್ಸ್ ಫೆಡರೇಶನ್ ಅಧ್ಯಕ್ಷ ಮತ್ತು ಬಾಲಿವುಡ್ ನ ಜನಪ್ರಿಯ ನಿರ್ಮಾಪಕ, ಸಮರ ಕಲಾತಜ್ಞ ಚಿತಾ ಯಜ್ಞೇಶ್ ಸಾರಥ್ಯದಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದ ಚೈನಾ ಟೌನ್ ಪ್ರದೇಶದಲ್ಲಿ ಜನಿಸಿ ವಿಶ್ವದ ಹೆಸರಾಂತ ಸಮರ ಕಲಾ ಸಾಧಕ, ಕರಾಟೆ ಪಟು ನಾಮಾಂಕಿತ ಬ್ರೂಸ್ ಲೀ ಅವರ 80ನೇ ಜನ್ಮ ದಿನಾಚರಣೆಯನ್ನು ಅಂಧೇರಿ ಪಶ್ಚಿಮದ ಯಜ್ಞೇಶ್ ಅಕಾಡೆಮಿಯಲ್ಲಿ ಆಚರಿಸಲಾಯಿತು.
ವ್ಯಕ್ತಿಗತ ಅಂತರ, ಸ್ವ ಸುರಕ್ಷತೆ, ಮುಖವಾಡ ಧರಿಸುವ ಮೂಲಕ ಕೋವಿಡ್ ನ್ನು ಹೇಗೆ ಓಡಿಸಬೇಕು ಎಂಬ ಅರಿವು ಮೂಡಿಸಿ, ಕೊರೊನಾ ನಿರ್ಮೂಲನೆಗಾಗಿ ಕೋವಿಡ್ ಗುಂಡಿಗೆ ಕರಾಟೆ ಶೈಲಿಯಲ್ಲಿ ಒದೆಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಚಿತಾ ಯಜ್ಞೇಶ್ ಕಳೆದ 12 ವರ್ಷಗಳಿಂದ ವೈವಿಧ್ಯವಾಗಿ ಬ್ರೂಸ್ ಲೀ ಜನ್ಮ ದಿನಾಚರಣೆ ಮಾಡುತ್ತಿದ್ದು, ಈ ಬಾರಿ ತ್ರಿಶಾನ್ ಶೆಟ್ಟಿ, ಹಾಂಗ್ ಕಾಂಗ್ ನ ವಿಲಿಯಂ ಬಾಂಡ್, ಚೀತಾ ಯಜ್ಞೇಶ್ ಮತ್ತು ಮಕ್ಕಳು ಉಪಸ್ಥಿತರಿದ್ದು ಬ್ರೂಸ್ ಲೀ ಬೃಹತ್ ಪೋಸ್ಟರ್ ಅನಾವರಣಗೊಳಿಸಿ ಬ್ರೂಸ್ ಲೀ ಪರಾಕ್ರಮ ಸ್ಮರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿ ಮಕ್ಕಳಿಗೆ ಫೇಸ್ ಮಾಸ್ಕ್, ಪುಸ್ತಕ, ಬಟ್ಟೆ ಮತ್ತು ಆಹಾರ ಪ್ಯಾಕೆಟ್ ನೀಡಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಚಿತಾ ಯಜ್ಞೇಶ್, ಬ್ರೂಸ್ ಲೀ ಅವರ ಹಿಂದಿನ ಜನ್ಮ ದಿನಾಚರಣೆಯನ್ನು ಜಾಗತಿಕ ತಾಪಮಾನ ಏರಿಕೆ, ಮಹಿಳಾ ಸಬಲೀಕರಣ, ಅರಣ್ಯ ರಕ್ಷಣೆ, ರಕ್ತದಾನ, ನಾರಿಯರ ಸ್ವರಕ್ಷಣೆ ತರಬೇತಿ, ಕೋವಿಡ್ ವಿರೋಧಿ ನಿಯಮಗಳ ಪುನರ್ವಸತಿ ವಿಷಯಗಳಿಗೆ ಸಮರ್ಪಿಸಲಾಗಿದೆ ಎಂದರು.
ಅಫಘಾನ್ ಬ್ರೂಸ್ ಲೀ, ಅಬ್ಬಾಸ್ ಅಲಿಜಾಡಾ, ಕಲ್ಮಾಕಿಯಾ ರಷ್ಯನ್ ಒಕ್ಕೂಟ ಅಧ್ಯಕ್ಷ ಮತ್ತು ಫಿಡ್ (ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್) ಅಧ್ಯಕ್ಷ ಕಿರ್ಸನ್ ಇಲ್ಯುಮ್ಜಿನೋವ್, ಸಿಫು ಕಾಸ್ಮೊ ಜಿಮಿಕ್, ನಂಬಾ, ಇಡಾಹೊ ಮತ್ತು ಖಾಲಿ ಕೈ ಯುದ್ಧ, ಯುಎಸ್ಎ, ಚಾವನ್ಯಾಚುರಲ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಆಫ್ ರಷ್ಯಾ ಮತ್ತು ಸಿಫು ಫಿಲ್ ರಾಸ್, ಅಮೆರಿಕನ್ ಈಗಲ್ ಎಂಎಂಎ ಮತ್ತು ಕೆಟಲ್ ಬೆಲ್ಸ್, ನ್ಯೂಜೆರ್ಸಿ, ಯುಎಸ್ಎ ಮೊದಲಾದ ರಾಷ್ಟ್ರಗಳಲ್ಲಿನ ಬ್ರೂಸ್ ಲೀ ಅಭಿಮಾನಿಗಳೂ ಸೇರಿದಂತೆ ದೇಶ ವಿದೇಶಗಳಲ್ಲಿ ಹಲವರು, ಭಾರತದಲ್ಲಿ ಬ್ರೂಸ್ ಲೀ ಜನ್ಮದಿನಾಚರಣೆ ಆಚರಿಸಿದ್ದಕ್ಕಾಗಿ ಚಿತಾ ಯಜ್ಞೇಶ್ ಅವರಿಗೆ ಶುಭಾಶಯ ಕೋರಿದರು.
ಉಡುಪಿ ನಿಂಜೂರಿನ ಶ್ರೀನಿವಾಸ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ದಂಪತಿ ಪುತ್ರ ಚಿತಾ ಯಜ್ಞೇಶ್ ಶೆಟ್ಟಿ ನಟ, ನಿರ್ದೇಶಕ, ನಿರ್ಮಾಪಕ, ಸಮರ ಕಲಾವಿದ ಮತ್ತು ಫಿಟ್ನೆಸ್ ತರಬೇತುದಾರರಾಗಿ ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಚಿರತೆ ಭಂಗಿಯಿಂದ ಆಕರ್ಷಿತನಾದ ಕಾರಣ ಚಿರತೆಯ ನಾಮವನ್ನೇ ಪೂರ್ವಪ್ರತ್ಯಯವಾಗಿ ಸೇರಿಸಿರುವ ಯಜ್ಞೇಶ್ ಸಮರ ಕಲೆಗಳಲ್ಲಿ ಸವಿವರ ಅಧ್ಯಯನ ಮಾಡಿ ಹೊಸ ಶೈಲಿಯನ್ನು ಪರಿಚಯಿಸಿದ್ದಾರೆ. ಅಲ್ಟ್ರಾ- ಲೆಜೆಂಡ್ ಕರಾಟೆ ಚಾಂಪಿಯನ್ ಬ್ರೂಸ್ ಲೀ ಅವರಿಗೆ ಗೌರವವಾಗಿ ಸಮರ ಕಲೆ ಆಧರಿಸಿದ ಹಾಲಿವುಡ್ ಚಲನಚಿತ್ರ ಹಿ ಈಸ್ ಬ್ಯಾಕ್ ನಿರ್ದೇಶಿಸಿದ್ದಾರೆ. ಯುಎಸ್ ಮಾರ್ಷಲ್ ಆರ್ಟ್ಸ್ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾಗಿರುವ ಮೊದಲ ಭಾರತೀಯ ಸ್ಟಂಟ್ ಮ್ಯಾನ್ ಎಂಬ ಖ್ಯಾತಿ ಪಡೆದಿದ್ದಾರೆ.