Wednesday, July 6, 2022
Home ಸಮಾಚಾರ ಸಂಘಸಂಗತಿ ಪತ್ರಕರ್ತರ ಸಂಘದ ಬಾಗಿಲು ಸರ್ವರಿಗೂ ಮುಕ್ತವಾಗಿರಬೇಕು

ಪತ್ರಕರ್ತರ ಸಂಘದ ಬಾಗಿಲು ಸರ್ವರಿಗೂ ಮುಕ್ತವಾಗಿರಬೇಕು

ಉಡುಪಿ: ಪತ್ರಕರ್ತರ ಸಂಘ ದೇವಾಲಯವಿದ್ದಂತೆ. ಇಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣುವಂತಾಗಬೇಕು. ಪತ್ರಕರ್ತರ ಸಂಘದ ಬಾಗಿಲು ಸರ್ವರಿಗೂ ತೆರೆದಿರಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಲಹೆ ನೀಡಿದರು.

ಶನಿವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭೇಟಿ ನೀಡಿದರು.

ಕೊರೊನಾ ಸಂದರ್ಭದಲ್ಲಿ ಪತ್ರಕರ್ತರ ಕಾರ್ಯನಿರ್ವಹಣೆ ಅದ್ಭುತ. ಎಲ್ಲ ಕಡೆಗೂ ಲಾಕ್ ಡೌನ್ ಹೇರಿದ್ದರೂ ಪತ್ರಕರ್ತರು, ಅದರಲ್ಲೂ ದೃಶ್ಯ ಮಾಧ್ಯಮದ ಪತ್ರಕರ್ತರು ತಮ್ಮ ವೃತ್ತಿಗೆ ಲಾಕ್ ಡೌನ್ ಹೇರಿಲ್ಲ. ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ.

ಅಗಲಿದ ಪತ್ರಕರ್ತರ ಕುಟುಂಬಕ್ಕೆ ನೆರವು
ದುಃಖದ ಸಂಗತಿ ಎಂದರೆ ಕೋವಿಡ್ ನ ಎರಡೂ ಅಲೆಗಳಲ್ಲಿ ರಾಜ್ಯದಲ್ಲಿ 100ಕ್ಕೂ ಅಧಿಕ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಮೊದಲ ಅಲೆಯಲ್ಲಿ 31 ಮಂದಿ ಜೀವ ಕಳೆದುಕೊಂಡಿದ್ದರೆ, ಎರಡನೇ ಅಲೆಯಲ್ಲಿ 70 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಕೋವಿಡ್ ಗೆ ಬಲಿಯಾದ ರಾಜ್ಯದ 31 ಮಂದಿ ಪತ್ರಕರ್ತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ದೊರಕಿಸಿಕೊಡಲಾಗಿದೆ ಎಂದರು.

ಅಂತೆಯೇ ಸುಮಾರು 30 ಮಂದಿ ಪತ್ರಿಕಾ ವಿತರಕರೂ ಅಸುನೀಗಿದ್ದಾರೆ ಎಂದು ತಗಡೂರು ಖೇದ ವ್ಯಕ್ತಪಡಿಸಿದರು.

ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುಮಾರು 8 ಸಾವಿರ ಮಂದಿ ಸದಸ್ಯರಿದ್ದಾರೆ. ಅವರೆಲ್ಲರ ಹಿತ ಕಾಯುವ ಕೆಲಸವನ್ನು ಸಂಘ ಪ್ರಾಮಾಣಿಕವಾಗಿ ಮಾಡುತ್ತಿದೆ.

ಕೊರೊನಾ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ರಾಜ್ಯ ಮಟ್ಟದ ಪತ್ರಿಕೆ, ದೃಶ್ಯ ಮಾಧ್ಯಮ ಹಾಗೂ ಸ್ಥಳೀಯ ಪತ್ರಿಕೆಗಳಿಗೆ ಬಾಕಿ ಇದ್ದ 56 ಕೋ. ರೂ. ಸರ್ಕಾರಿ ಜಾಹೀರಾತು ಬಿಲ್ ನ್ನು ಏಕ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಪತ್ರಕರ್ತರಿಗೆ ಕೋವಿಡ್ ಲಸಿಕೆ ನೀಡಿಕೆಯಲ್ಲಿ ಯಶ ಸಾಧಿಸಲಾಗಿದೆ. ಗ್ರಾಮೀಣ ಪತ್ರಕರ್ತರೂ ಸೇರಿದಂತೆ ಎಲ್ಲ ಪತ್ರಕರ್ತರಿಗೂ ಆರೋಗ್ಯ ಕಾರ್ಡು, ಬಸ್ ಪಾಸ್ ಇತ್ಯಾದಿ ಸೌಲಭ್ಯ ನೀಡುವಲ್ಲಿ ಸಂಘ ಶ್ರಮಿಸುತ್ತಿದೆ ಎಂದರು.

ಏಷ್ಯನ್ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಮದನಗೌಡ, ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ರಾಜ್ಯ ಸರ್ಕಾರ ನೀಡಿರುವ ನಿವೇಶನದಲ್ಲಿ ಸುಮಾರು 10 ಕೋ. ರೂ. ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲುದ್ದೇಶಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಂಘ ಹಾಗೂ ಪತ್ರಕರ್ತರ ವಿವಿಧ ಬೇಡಿಕೆಗಳ ಮನವಿಯನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಯಿತು.

ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಬಳಗ ವತಿಯಿಂದ ನೀಡಲಾದ ಫೇಸ್ ಶೀಲ್ಡ್ ಗಳನ್ನು ಪತ್ರಕರ್ತರಿಗೆ ಹಸ್ತಾಂತರಿಸಲಾಯಿತು.

ಬಳಿಕ ರಾಜ್ಯಾಧ್ಯಕ್ಷರೊಂದಿಗೆ ಪತ್ರಕರ್ತರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತರಾದ ರಾಕೇಶ್ ಕುಂಜೂರು ಹಾಗೂ ದೀಪಕ್ ಜೈನ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!