ಉಡುಪಿ: ಕೊರೊನಾ ಕಾರಣದಿಂದಾಗಿ ಇನ್ನೂ ಸರಿಯಾಗಿ ಶಾಲಾರಂಭವಾಗದ ಹಿನ್ನೆಲೆಯಲ್ಲಿ ಕುಸಿದಿರುವ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹಾಗೂ ದಿಗಿಲುಗೊಂಡ ಹೆತ್ತವರ ಪರಿಸ್ಥಿತಿಯನ್ನು ಅವಲೋಕಿಸಿದ ರೋಟರಿ ಸಂಸ್ಥೆ, ವಿದ್ಯಾಸೇತು ಮೂಲಕ ಶಿಕ್ಷಣ ಅಭಿಯಾನ ಆರಂಭಿಸಿದೆ.
ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3182 ವ್ಯಾಪ್ತಿಯ ಸುಮಾರು 50 ಸಾವಿರ ಮಂದಿ 10ನೇ ತರಗತಿಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪೂರಕವಾದ ಮಾರ್ಗದರ್ಶಿ ಪುಸ್ತಕಗಳನ್ನು ವಿತರಿಸುತ್ತಿದೆ ಎಂದು ರೋಟರಿ ಗವರ್ನರ್ ಎಂ.ಜಿ. ರಾಮಚಂದ್ರಮೂರ್ತಿ ತಿಳಿಸಿದರು.
ಶುಕ್ರವಾರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಗಣಿತ, ವಿಜ್ಞಾನ ಮತ್ತು ಆಂಗ್ಲಭಾಷೆಗಳನ್ನೊಳಗೊಂಡ 2 ಸಂಪುಟದ ಪುಸ್ತಕಗಳನ್ನು ಸರಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವುದು. ತಲಾ 250 ಪುಟಗಳ ಈ ಎರಡೂ ಪುಸ್ತಕಗಳಿಗೆ ರೋಟರಿ ಸಂಸ್ಥೆ 100 ರೂ. ವ್ಯಯಿಸಲಿದೆ.
ಈ ಹಿಂದಿನ 8 ಮತ್ತು 9ನೇ ತರಗತಿಯಲ್ಲಿ ಪೂರ್ಣಪ್ರಮಾಣದಲ್ಲಿ ಬೋಧನೆ ಸಾಧ್ಯವಾಗದೇ ಪರೀಕ್ಷೆಗಳನ್ನೂ ನಡೆಸಲಾಗದೇ ಸರಿಯಾದ ಪಠ್ಯಾಭ್ಯಾಸವೂ ಆಗದೇ ಪರಿತಪಿಸುತ್ತಿರುವ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ಅನುಭವಿ ಶಿಕ್ಷಕರು ಮಾರ್ಗದರ್ಶಿ ಪುಸ್ತಕ ಸಿದ್ಧಪಡಿಸಿದ್ದು, ಸೂಕ್ತ ಮಾರ್ಗದರ್ಶನದ ಮೂಲಕ ಮಕ್ಕಳ ಕಲಿಕಾ ಅಂತರ ಶೂನ್ಯವಾಗಿಸಿ ಅವರನ್ನು ಶೈಕ್ಷಣಿಕವಾಗಿ ಮುನ್ನಡೆಸುವ ಆಶಯ ತಮ್ಮದು ಎಂದರು.
ಪ್ರಥಮ ಹಂತದಲ್ಲಿ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3182ರಲ್ಲಿ ಸುಮಾರು 10 ಸಾವಿರ ಪುಸ್ತಕ ವಿತರಿಸಲು ಆರಂಭಿಸಲಾಗಿದೆ. ರೋಟರಿ ಕಂದಾಯ ಜಿಲ್ಲೆಗಳ ಸುಮಾರು 40 ಸಾವಿರ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ ಎಂದರು.
ರಾಜ್ಯದ ಇತರ 5 ರೋಟರಿ ಜಿಲ್ಲೆಗಳೂ ಈ ಯೋಜನೆ ಕೈಗೆತ್ತಿಕೊಳ್ಳಲಿವೆ ಎಂದರು.
ಉಡುಪಿ ರೋಟರಿಗೆ ಸಾರಥ್ಯ
ಈ ಯೋಜನೆಯ ನಾಯಕತ್ವವನ್ನು ಉಡುಪಿ ರೋಟರಿಗೆ ವಹಿಸಲಾಗಿದೆ. ಪುಸ್ತಕಗಳನ್ನು ತರಿಸಿ, ಬೇಡಿಕೆಗನುಸಾರ ವಿವಿಧ ರೋಟರಿ ಕ್ಲಬ್ ಗಳ ಮೂಲಕ ವಿತರಿಸುವ ಗುರುತರ ಜವಾಬ್ದಾರಿಯನ್ನು ಹೇಮಂತ ಕಾಂತ್ ಅಧ್ಯಕ್ಷತೆಯ ಉಡುಪಿ ರೋಟರಿಗೆ ವಹಿಸಲಾಗಿದ್ದು, ಮುಂಚೂಣಿ ಕ್ಲಬ್ ಆಗಿ ಉತ್ತಮ ಕಾರ್ಯನಿರ್ವಹಿಸಿದೆ ಎಂದು ರಾಮಚಂದ್ರಮೂರ್ತಿ ಹೇಳಿದರು.
ಜಿಲ್ಲಾ ಸಾಕ್ಷರತಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ, ವಲಯ 4ರ ಸಹಾಯಕ ಗವರ್ನರ್ ಡಾ. ಸುರೇಶ ಶೆಣೈ, ರೋಟರಿ ಜಿಲ್ಲೆ 3182ರ ಜೊತೆ ಕಾರ್ಯದರ್ಶಿ ಮುರಳಿ, ಕೋ- ಆರ್ಡಿನೇಟರ್ ರವೀಂದ್ರ ಐತಾಳ, ಉಡುಪಿ ರೋಟರಿ ಅಧ್ಯಕ್ಷ ಹೇಮಂತ ಕಾಂತ್, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೋಶಾಧಿಕಾರಿ ಗುರುರಾಜ ಭಟ್ ಇದ್ದರು.