Saturday, July 2, 2022
Home ಸಮಾಚಾರ ಸಂಘಸಂಗತಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆಮ್ಲಜನಕ ಘಟಕ ನಿರ್ಮಾಣ; ಆರೋಗ್ಯ ಇಲಾಖೆಗೆ ಆಕ್ಸಿಜನ್ ಸಾಂದ್ರಕ...

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆಮ್ಲಜನಕ ಘಟಕ ನಿರ್ಮಾಣ; ಆರೋಗ್ಯ ಇಲಾಖೆಗೆ ಆಕ್ಸಿಜನ್ ಸಾಂದ್ರಕ ಕೊಡುಗೆ

ಉಡುಪಿ: ಕೊರೊನಾ ಪೀಡಿತರಿಗೆ ಉಂಟಾಗುತ್ತಿರುವ ಆಮ್ಲಜನಕ ಕೊರತೆಯನ್ನು ಗಮನಿಸಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರು ಕಾರ್ಕಳದಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಘಟಕ ನಿರ್ಮಾಣ ಹಾಗೂ ಉಡುಪಿಯೂ ಸೇರಿದಂತೆ ಇತರ ಜಿಲ್ಲೆಗಳಿಗೆ ಸುಮಾರು 45 ಲಕ್ಷ ರೂ. ವೆಚ್ಚದ 60 ಆಕ್ಸಿಜನ್ ಕೊನ್ಸನೇಟರ್ (ಆಮ್ಲಜನಕ ಸಾಂದ್ರಕ)ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

60ಕ್ಕೂ ಅಧಿಕ ಬೆಡ್ ಗಳಿಗೆ ಸಹಕಾರಿ
ಕಾರ್ಕಳ ಸರ್ಕಾರಿ ಆಸ್ಪತ್ರೆ ವಠಾರದಲ್ಲಿ ನಿರ್ಮಿಸಲಾಗುತ್ತಿರುವ ಆಮ್ಲಜನಕ ಘಟಕ 6 ಸಾವಿರ ಲೀ. ಸಾಮರ್ಥ್ಯವುಳ್ಳ ಸುಸಜ್ಜಿತ ಅತ್ಯಾಧುನಿಕ ಮಾದರಿಯ ಸಂಪೂರ್ಣ ಸ್ವಯಂಚಾಲಿತ ಆಕ್ಸಿಜನ್ ತಯಾರಿಕಾ ಘಟಕವಾಗಿದೆ. ಈ ಘಟಕ 60ಕ್ಕಿಂತಲೂ ಅಧಿಕ ಬೆಡ್ ಗಳಿಗೆ ಆಕ್ಸಿಜನ್ ಪೂರೈಸುವ ಸಾಮರ್ಥ್ಯ ಹೊಂದಿದೆ.

ಕೊರೊನಾ ಪೀಡಿತರಿಗೆ ವರದಾನ
ಆಕ್ಸಿಜನ್ ಕೊನ್ಸನೇಟರ್ ಪೊರ್ಟೆಬಲ್ ಮೆಶಿನ್ ಆಗಿದ್ದು, ಸುತ್ತಲೂ ಇರುವ ಗಾಳಿಯಿಂದ ಆಮ್ಲಜನಕ ಹೀರಿ, ರೋಗಿಗಳಿಗೆ ಉಪಯೋಗಿಸಲು ಸಹಕಾರಿಯಾಗಲಿದೆ. ಪ್ರತೀ ಆಕ್ಸಿಜನ್ ಕೊನ್ಸನೇಟರ್ ವಿಭಿನ್ನ ಪ್ರಮಾಣದಲ್ಲಿ ಗಾಳಿಯನ್ನು ನಿರಂತರವಾಗಿ ಸೆಳೆಯಲಿದ್ದು, ಅದರಲ್ಲಿ ಎಂದಿಗೂ ಆಮ್ಲಜನಕ ಖಾಲಿಯಾಗುವುದಿಲ್ಲ. ನಿಮಿಷಕ್ಕೆ 7ರಿಂದ 8 ಲೀ.ನಷ್ಟು ಆಮ್ಲಜನಕ ಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ಆಮ್ಲಜನಕ ಸಾಂದ್ರಕ, ತುರ್ತು ಸಂದರ್ಭದಲ್ಲಿ ಕೊರೊನಾ ಪೀಡಿತ ರೋಗಿಗಳಿಗೆ ವರದಾನವಾಗಲಿದೆ.

ಡಾ| ಜಿ. ಶಂಕರ್ ನೀಡಿರುವ 60 ಆಮ್ಲಜನಕ ಸಾಂದ್ರಕ ಪೈಕಿ ವಿಜಯಪುರ 15, ಗುಲ್ಬರ್ಗ ಮತ್ತು ಯಾದಗಿರಿ ತಲಾ 10, ಕೊಪ್ಪಳ 5 ಹಾಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ತಲಾ 10 ಸಾಂದ್ರಕಗಳನ್ನು ನೀಡಿದ್ದಾರೆ.

ಮಾನವೀಯ ಕಾರ್ಯ

ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ಅಟೋ ರಿಕ್ಷಾ ಚಾಲಕರು ಮತ್ತು ಅನಾಥರಿಗೆ ಆಹಾರ ಕಿಟ್, ವಿಜಯಪುರ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ವೆಂಟಿಲೇಟರ್ ಗಳು, ವಿವಿಧ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪೋಲಿಸ್ ಇಲಾಖೆಯ ಕೋವಿಡ್ ಫ್ರಂಟ್ ಲೈನ್ ವಾರಿಯರ್ ಗಳಿಗೆ ಎನ್ 95 ಮಾಸ್ಕ್, ಫೇಸ್ ಶೀಲ್, ಹ್ಯಾಂಡ್ ಗ್ಲೌಸ್, ಸಾನಿಟೈಸರ್, ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್, ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯುವಂತಾಗಲು ಎಲ್ಲಾ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಕೊಡುಗೆ ಇತ್ಯಾದಿ ಸುಮಾರು 5 ಕೋ. ರೂ.ಗಳಿಗೂ ಮಿಕ್ಕಿದ ಅನೇಕ ಕೊಡುಗೆಯನ್ನು ನಾಡೋಜ ಡಾ| ಜಿ. ಶಂಕರ್ ನೀಡಿದ್ದರು.

ಕೊರೊನಾ ಭೀತಿಯಿಂದ ಸಂಬಂಧಿಕರು ಮೃತದೇಹ ಮುಟ್ಟಲು ಹಿಂಜರಿದು, ಮೃತದೇಹಗಳಿಗೆ ಯಾವುದೇ ಗೌರವ ನೀಡದೆ ನಿರ್ಲಕ್ಷ್ಯದಿಂದ ಅಂತ್ಯಸಂಸ್ಕಾರ ಮಾಡುವುದನ್ನು ಮಾಧ್ಯಮಗಳ ಮೂಲಕ ಅರಿತ ಜಿ. ಶಂಕರ್ ಅವರು ಮಮ್ಮಲಮರುಗಿ ಜಾತಿ, ಮತ, ಧರ್ಮ ಬೇಧವಿಲ್ಲದೆ ಜಿ. ಶಂಕರ್ ಫ್ರಂಟ್ ಲೈನ್ ವಾರಿಯರ್ಸ್ ತಂಡದ ಮೂಲಕ ಕೊರೊನಾ ಪಾಸಿಟಿವ್ ಹೊಂದಿ ಸಾವನ್ನಪ್ಪಿದ 130ಕ್ಕೂ ಅಧಿಕ ಪಾರ್ಥಿವ ಶರೀರಗಳ ಅಂತ್ಯ ಸಂಸ್ಕಾರವನ್ನು ಸರ್ಕಾರದ ಕೋವಿಡ್ ಅಂತ್ಯಕ್ರಿಯೆ ಮಾರ್ಗಸೂಚಿ ಪ್ರಕಾರ ನಿರ್ವಹಿಸಲಾಗಿತ್ತು.

ಪರಿಸ್ಥಿತಿ ಅರಿತು ಪ್ರಾಣವಾಯು ಕೊಡುಗೆ
ಸರ್ವರಿಗೂ ಆರೋಗ್ಯ ಮತ್ತು ಶಿಕ್ಷಣ ಲಭಿಸಿದಾಗ ಸಮಾಜ ಸದೃಢವಾಗುತ್ತದೆ. ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ಜನರು ಉಸಿರಾಟದ ತೊಂದರೆ ಎದುರಿಸುತ್ತಿದ್ದಾರೆ. ಪ್ರತಿನಿತ್ಯ ಹೆಚ್ಚೆಚ್ಚು ಹೊಸ ಪ್ರಕರಣ ದಾಖಲಾಗುತ್ತಿರುವುದರಿಂದ ದೇಶದೆಲ್ಲೆಡೆ ಆಕ್ಸಿಜನ್ ಕೊರತೆ ಎದುರಾಗಿದೆ. ಸಕಾಲಕ್ಕೆ ಆಕ್ಸಿಜನ್ ದೊರಕದ ಕಾರಣ ಪ್ರತಿನಿತ್ಯ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಎರಡನೇ ಅಲೆಯ ಈ ಸಂದರ್ಭದಲ್ಲೂ ಟ್ರಸ್ಟ್ ವತಿಯಿಂದ 1.15 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಮತ್ತು ಕೊನ್ಸನೇಟರ್ ಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಡಾ. ಜಿ. ಶಂಕರ್ ಹೇಳಿದರು.

ಕೋವಿಡ್ 19ರ ಲಾಕ್ ಡೌನ್ ನ ಈ ಸಮಯದಲ್ಲಿಯೂ ತುರ್ತಾಗಿ ಈ ಆಕ್ಸಿಜನ್ ಕೊನ್ಸನೇಟರ್ ಗಳನ್ನು ಮುಂಬೈಯಿಂದ ಇಲ್ಲಿಗೆ ತರಲು ಮುಂಬೈಯ ಉದ್ಯಮಿಗಳಾದ ಸುರೇಶ್ ಕಾಂಚನ್ ಹಾಗೂ ಗಿರೀಶ್ ಸಹಕರಿಸಿದ್ದಾರೆ.

ಜನರು ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಟ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಂಡು ಕೊರೊನಾ ಎರಡನೇ ಅಲೆ ಮತ್ತು ಮೂರನೇ ಅಲೆಗಳಿಂದ ಸಂಬವಿಸಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಬೇಕು ಎಂದವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!