ಉಡುಪಿ: ತುರ್ತು ಪರಿಸ್ಥಿತಿ ಯಾವಾಗ ಮತ್ತು ಯಾರಿಗೆ ತೊಂದರೆ ನೀಡುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ. ಅಂಥ ಸಂದರ್ಭದಲ್ಲಿ ಪರಿಣತ ಪ್ರಥಮ ಚಿಕಿತ್ಸಕರಿದ್ದರೆ ಸಾವು ನೋವು ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ರೆಡ್ ಕ್ರಾಸ್ ಆಶಯದಂತೆ ಯುವಜನರು ಪ್ರಥಮ ಚಿಕಿತ್ಸೆ ಪರಿಣತಿ ಪಡೆದು ಸಮಾಜಕ್ಕೆ ಸಹಾಯ ಮಾಡುವ ಪ್ರವೃತ್ತಿಯನ್ನು ಹೊಂದಬೇಕು ಎಂದು ರೆಡ್ ಕ್ರಾಸ್ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಯುವ ರೆಡ್ ಕ್ರಾಸ್ ಘಟಕ ಆಶ್ರಯದಲ್ಲಿ ನಡೆದ ಪ್ರಥಮ ಚಿಕಿತ್ಸಾ ಕಾರ್ಯಾಗಾರದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ, ಇತರರ ಕಷ್ಟಕ್ಕೆ ಸ್ಪಂದಿಸುವ ಎಲ್ಲರ ಒಳಿತಿಗಾಗಿ ಕೆಲಸ ಮಾಡುವ ಸಾಮಾಜಿಕ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ. ಪ್ರಥಮ ಚಿಕಿತ್ಸಾ ಕೌಶಲ ವೃದ್ಧಿಸಿಕೊಂಡು ಸಮಾಜದ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿದರು.
ಸಂಪನ್ಮೂಲವ್ಯಕ್ತಿ ಡಾ. ಕೀರ್ತಿ ಪಾಲನ್ ಪ್ರಥಮ ಚಿಕಿತ್ಸೆಯ ಸಿದ್ಧಾಂತ ಹಾಗೂ ಪ್ರಕ್ರಿಯೆ ವಿವರಿಸಿದರು.
ಭಾರತೀಯ ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಹಾಗೂ ಯೂತ್ ರೆಡ್ ಕ್ರಾಸ್ ಡೈರೆಕ್ಟರ್ ಸುನಿಲ್ ಕುಮಾರ್ ಶೆಟ್ಟಿ ಇದ್ದರು.
ಕಾಲೇಜಿನ ಯೂತ್ ರೆಡ್ ಕ್ರಾಸ್ ಸಂಚಾಲಕ ಪ್ರೊ. ಉದಯ ಶೆಟ್ಟಿ ಕೆ. ಸ್ವಾಗತಿಸಿದರು. ಮೇಘ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ವಂದಿಸಿದರು