Sunday, July 3, 2022
Home ಸಮಾಚಾರ ಸಂಘಸಂಗತಿ ಸುಶಿಕ್ಷಿತ ಹೆಣ್ಣುಮಕ್ಕಳಿಂದ ಸಾಧನೆ ಸಾಧ್ಯ

ಸುಶಿಕ್ಷಿತ ಹೆಣ್ಣುಮಕ್ಕಳಿಂದ ಸಾಧನೆ ಸಾಧ್ಯ

ಕೋಟ: ಹೆಣ್ಣುಮಕ್ಕಳು ಸುಶಿಕ್ಷಿತರಾದಲ್ಲಿ ಸಾಧನೆ ಮಾಡಲು ಸಾಧ್ಯ. ಇಂದು ಬ್ಯಾರಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿಯೂ ವಿಶೇಷ ಪ್ರತಿಭೆ ಇದೆ. ಅದನ್ನು ಪೋಷಿಸಿ, ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಸಹಾಯಕ ಅಭಿಯೋಗ ನಿರ್ದೇಶಕಿ ಮಮ್ತಾಜ್ ಹೇಳಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೋಟ ಡಾ| ಕಾರಂತ ಪ್ರತಿಷ್ಠಾನ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೋಟ ಕಾರಂತ ಥೀಮ್ ಪಾರ್ಕ್ ನಲ್ಲಿ ಶನಿವಾರ ನಡೆದ ಅಕಾಡೆಮಿಯ ಪ್ರಥಮ ಅವಧಿಯ ಸದಸ್ಯರಾಗಿದ್ದ ಡಾ| ಪಿ. ಸುಶೀಲಾ ಉಪಾಧ್ಯಾಯ ಸಂಸ್ಮರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ| ನಿಕೇತನ, ಸುಶೀಲಾ ಉಪಾಧ್ಯಾಯ ಕುರಿತು ಸಂಸ್ಮರಣ ಉಪನ್ಯಾಸ ನೀಡಿ, ಅವರೋರ್ವ ಮಹಾ ಮಾನವತಾವಾದಿ. ಸಾಧಕರಿಗೆ ಜಾತಿ, ಲಿಂಗ, ಭಾಷೆ, ಬಣ್ಣ ಯಾವುದೂ ಅಡ್ಡಿಯಾಗದು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾನತೆ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾ. ಪಂ. ಅಧ್ಯಕ್ಷೆ ಅಶ್ವಿನಿ ದಿನೇಶ್, ಪ್ರತಿಷ್ಠಾನದ ಟ್ರಸ್ಟಿ ಇಬ್ರಾಹಿಂ ಕೋಟ, ಕಾರ್ಯದರ್ಶಿ ನರೇಂದ್ರ ಕೋಟ, ಕರ್ನಾಟಕ ಹಜ್ ಸಮಿತಿ ಮಾಜಿ ಸದಸ್ಯ ಸಲೀಂ ಅಂಬಾಗಿಲು, ಕೋಟತಟ್ಟು ಗ್ರಾ. ಪಂ. ನೋಡೆಲ್ ಅಧಿಕಾರಿ ಡಾ| ಅರುಣ್ ಕುಮಾರ್ ಶೆಟ್ಟಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಸದಸ್ಯ ಶೇಖ್ ಆಸೀಫ್ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಸಾಧಕಿಯರಾದ ಮಮ್ತಾಝ್, ಡಾ. ವಾರಿಜ ಎನ್., ಸುಶೀಲಾ ಸೋಮಶೇಖರ್, ಡಾ. ಫಿರ್ದೋಸ್, ಡಾ. ಅಪ್ಸರಿ ಬಾನು ಎಂ., ಮೀನಾ ಪಿಂಟೊ ಕಲ್ಯಾಣಪುರ, ಫರ್ಝಾನ ಎಂ., ಲಲಿತಾ ಪೂಜಾರಿ ಕೊರವಡಿ, ಸುಜಾತಾ ಅಂದ್ರಾದೆ, ಶೈಲಾ ಎಸ್. ಪೂಜಾರಿ, ಮಂಜುಶ್ರೀ ರಾಕೇಶ್ ಕಟಪಾಡಿ ಅವರನ್ನು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸನ್ಮಾನಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ಸದಸ್ಯ, ಪತ್ರಕರ್ತ ನಝೀರ್ ಪೊಲ್ಯ ವಂದಿಸಿದರು. ಅಕಾಡೆಮಿ ಸದಸ್ಯರಾದ ಚಂಚಲಾಕ್ಷಿ, ಶಂಶೀರ್ ಬುಡೋಳಿ ಮತ್ತು ಸುರೇಖಾ ಇದ್ದರು.

ಅನುಷಾ ನಿರೂಪಿಸಿದರು. ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮೆಹಂದಿ ಸ್ಪರ್ಧೆ ಮತ್ತು ಸಂಗೀತ ಕುರ್ಚಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬಳಿಕ ಸಾಬ್ರಕಟ್ಟೆ ಅಕ್ಷರ ಪ್ರತಿಷ್ಠಾನ ತಂಡದಿಂದ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!